ತೆಲುಗು ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರಿಗೆ ಸಲ್ಲುತ್ತದೆ. ಬಾಹುಬಲಿ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ರಾಜಮೌಳಿ ಬಳಿಕ ಆರ್‌ಆರ್‌ಆರ್ ಸಿನಿಮಾದಿಂದ ಭಾರತ ಮಾತ್ರವಲ್ಲದೇ, ವಿದೇಶದ ಥಿಯೇಟರ್ಗಳಲ್ಲಿಯೂ ಧೂಳೆಬ್ಬಿಸಿದ್ದರು. 2022 ರಲ್ಲಿ ದಕ್ಷಿಣ ಚಿತ್ರರಂಗ ಕಂಡ ಸೂಪರ್ ಹಿಟ್ ಸಿನಿಮಾ ಇದಾಗಿತ್ತು.
ಜನಪ್ರಿಯ ತಾರೆಯರಾದ ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ದರು. 1,200 ಕೋಟಿ ರೂ.ಗೂ ಅಧಿಕೆ ಗಳಿಕೆ ಮಾಡಿರುವ ಈ ಸಿನಿಮಾ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಲ್ಲದೇ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಸಿಕ್ಕಿದೆ.
ಅಮೆರಿಕದ ಸ್ಕ್ರೀನಿಂಗ್ ಸಮಯದಲ್ಲಿ ರಾಜಮೌಳಿ ತಮ್ಮ ಸಿನಿಮಾದಲ್ಲಿ ಹಾಡುಗಳನ್ನು ಹೇಗೆ ಬಳಸಿದರು ಎಂಬುದರ ಕುರಿತು ಮಾತನಾಡಿದ್ದಾರೆ. ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ರಾಜಮೌಳಿ, ಆರ್‌ಆರ್‌ಆರ್ ಬಾಲಿವುಡ್ ಸಿನಿಮಾವಲ್ಲ ಎಂದು ಒತ್ತಿ ಹೇಳಿದ್ದಾರೆ. 'ಇದು ದಕ್ಷಿಣ ಭಾರತದ ತೆಲುಗು ಚಿತ್ರ. ಆದರೆ ಚಿತ್ರವನ್ನು ನಿಲ್ಲಿಸಿ ಸಂಗೀತ ಮತ್ತು ನೃತ್ಯದ ತುಣುಕನ್ನು ನೀಡುವುದಕ್ಕಿಂತ ಕಥೆಯನ್ನು ಮುಂದಕ್ಕೆ ಸಾಗಿಸಲು ನಾನು ಹಾಡನ್ನು ಬಳಸುತ್ತೇನೆ. ಅಲ್ಲದೇ ಮೂರು ತಾಸಿನ ಸಿನಿಮಾ ಅಭಿಮಾನಿಗಳಿಗೆ ಖುಷಿ ಕೊಟ್ಟಿಲ್ಲ ಅಂದ್ರೆ ನಾನು ಸೋತಿದ್ದೇನೆ ಎಂದರ್ಥ. ಆದ್ರೆ ಈ ಸಿನಿಮಾದಲ್ಲಿ ನಾನು ಖಂಡಿತ ಗೆದ್ದಿದ್ದೇನೆ' ಎಂದಿದ್ದಾರೆ. ಇವರ ಈ ಹೇಳಿಕೆ ಸಖತ್ ವೈರಲ್ ಆಗಿದ್ದು, ಸೌತ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.