'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾ ಥಿಯೇಟರ್ಗಳಲ್ಲಿ ಧೂಳೆಬ್ಬಿಸುತ್ತಿದೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮಾಡ್ರನ್ ಫ್ಯಾಮಿಲಿ ಲವ್ ಸ್ಟೋರಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರ ಬಿಡುಗಡೆಯಾದ ಎರಡನೇ ವಾರವೂ ಕಲೆಕ್ಷನ್ ವಿಚಾರದಲ್ಲಿ ವೇಗದ ಓಟ ಮುಂದುವರೆಸಿದೆ. ಚಿತ್ರ ಜುಲೈ 28ರಂದು ತೆರೆಗೆ ಅಪ್ಪಳಿಸಿತ್ತು.
9ನೇ ದಿನದ ಕಲೆಕ್ಷನ್:'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಆರಂಭದ ದಿನದಿಂದಲೂ ಉತ್ತಮ ಕಲೆಕ್ಷನ್ ಮಾಡುತ್ತಿ ಬಂದಿದೆ. ಎರಡನೇ ಶನಿವಾರದಂದೂ ಉತ್ತಮ ಗಳಿಕೆ ಕಂಡಿದೆ. ಇಂದು ಕೂಡ ಅತೀ ಹೆಚ್ಚು ಜನರು ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸುವ ನಿರೀಕ್ಷೆ ಇದ್ದು, ಭಾರತದಲ್ಲಿ 100 ಕೋಟಿ ರೂ ಕ್ಲಬ್ ಸೇರುವ ಸಾಧ್ಯತೆ ಇದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಚಿತ್ರವು 9ನೇ ದಿನ (ಶನಿವಾರದಂದು) 11.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಈ ಸಿನಿಮಾ ಮೊದಲ ದಿನ 11.1 ಕೋಟಿ ರೂ., ಎರಡನೇ ದಿನ 16.5 ಕೋಟಿ ರೂ., ಮೂರನೇ ದಿನ 19 ಕೋಟಿ ರೂ., ನಾಲ್ಕನೇ ದಿನ 7.50 ಕೋಟಿ ರೂ., ಐದನೇ ದಿನ 7.25 ಕೋಟಿ ರೂ., ಆರನೇ ದಿನ 6.90 ಕೋಟಿ ರೂ., ಏಳನೇ ದಿನ 6.25 ಕೋಟಿ ರೂ. ಮತ್ತು ಎಂಟನೇ ದಿನ 6.90 ಕೋಟಿ ರೂ. ಗಳಿಸಿತ್ತು. ಈ ಮೂಲಕ ಚಿತ್ರವು ಒಟ್ಟು 90.58 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಈಗಾಗಲೇ 100 ಕೋಟಿ ಕ್ಲಬ್ ಸೇರಿದೆ. ಇದೀಗ ಭಾರತದಲ್ಲೂ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ.