ಚಂದನವನದ ಎವರ್ಗ್ರೀನ್ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುತ್ತಾರೆ. ಹೊಸ ಫೋಟೋಗಳನ್ನು ಶೇರ್ ಮಾಡುತ್ತಾ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಮಾರ್ಚ್ ಮೊದಲ ವಾರದಲ್ಲಿ ರಾಧಿಕಾ ಹುಟ್ಟುಹಬ್ಬವಿದ್ದು, ಅವರು ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದರು. ಅಲ್ಲೇ ತಮ್ಮ ಬರ್ತ್ಡೇಯನ್ನು ಆಚರಿಸಿಕೊಂಡಿದ್ದರು. ಇದೀಗ ಫಾರಿನ್ ಟ್ರಿಪ್ ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ರಾಕಿ ಬಾಯ್ ಫ್ಯಾನ್ಸ್ ಮಾಡಿರೋ ಕಮೆಂಟ್ಗಳು ಸಖತ್ ವೈರಲ್ ಆಗಿವೆ.
ಮಾರ್ಚ್ 7ರಂದು ರಾಧಿಕಾ ಪಂಡಿತ್ ಬರ್ತ್ಡೇ ಇತ್ತು. ಆ ದಿನದಂದು ಪತಿ ಯಶ್, ಮಕ್ಕಳು ಮತ್ತು ಕುಟುಂಬದವರ ಜೊತೆ ನಟಿ ಟ್ರಿಪ್ಗೆಂದು ವಿದೇಶಕ್ಕೆ ತೆರಳಿದ್ದರು. ಅಂದು ಅಲ್ಲಿ ಕ್ಲಿಕ್ಕಿಸಿದ ಚಂದನೆಯ ಫೋಟೋವನ್ನು ಇಂದು ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಫೋನ್ ಹಿಡಿದು ಪೋಸ್ ಕೊಟ್ಟಿರುವ ನಟಿಯ ಬ್ಯೂಟಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮೂರೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ಗಳು ಬಂದಿವೆ. ಅಲ್ಲದೇ ಹೊಗಳಿಕೆಯ ಕಮೆಂಟ್ ಕೂಡ ಸಿಕ್ಕಿದೆ. ಆದರೆ ಫೋಟೋಗೆ ಯಶ್ ಅಭಿಮಾನಿಯೊಬ್ಬರು ಮಾಡಿರೋ ಕಮೆಂಟ್ಗಳು ವೈರಲ್ ಆಗಿವೆ.
"ಅತ್ತಿಗೆ, ಯಶ್ ಅವರ 19ನೇ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿ. ಇಲ್ಲಂದ್ರೆ ಸ್ಟ್ರೈಕ್ ಮಾಡ್ತೀವಿ" ಅಂತಾ ಫ್ಯಾನ್ಸ್ ಒಬ್ಬರು ಹೇಳಿದ್ದಾರೆ. ಕೆಜಿಎಫ್ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿರುವ ಯಶ್ ಆ ಬಳಿಕ ಯಾವುದೇ ಚಿತ್ರಗಳನ್ನೂ ಅನೌನ್ಸ್ ಮಾಡಿಲ್ಲ. ಹೀಗಾಗಿ ಫ್ಯಾನ್ಸ್ ಅವರ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಅಲ್ಲದೇ ಈ ಬಾರಿ ಯಶ್ ತಮ್ಮ ಹುಟ್ಟುಹಬ್ಬಕ್ಕೂ ಫ್ಯಾನ್ಸ್ಗೆ ಸಿಕ್ಕಿರಲಿಲ್ಲ. ಜೊತೆಗೆ ತಮ್ಮ ಮುಂದಿನ ಫಿಲ್ಮ್ ಬಗ್ಗೆನೂ ಮಾಹಿತಿ ನೀಡುತ್ತಿಲ್ಲ. ಹೀಗಾಗಿಯೇ ಅಭಿಮಾನಿಗಳಿಗೆ ಯಶ್ ಮೇಲೆ ಕೊಂಚ ಅಸಮಾಧಾನವಿದ್ದು, ಇದೀಗ ರಾಧಿಕಾ ಬಳಿ ಕೇಳುತ್ತಿದ್ದಾರೆ.