ಸ್ಯಾಂಡಲ್ವುಡ್ನಲ್ಲಿ 'ಕಾಂತಾರ' ಚಿತ್ರ ದಂತಕಥೆಯಾಗಿಯೇ ಉಳಿಯಲಿದೆ. ಚಿತ್ರವು ಶೆಟ್ರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಲ್ಲದೇ, ಹಲವಾರು ದಾಖಲೆಗಳನ್ನೂ ತನ್ನೊಡಲಿಗೆ ಹಾಕಿಕೊಂಡಿದೆ. ಇದೀಗ ಚಿತ್ರವನ್ನರಸಿ ಮತ್ತೊಂದು ಪ್ರಶಸ್ತಿ ಬಂದಿದೆ. ಪ್ರತಿ ವರ್ಷವೂ ಸಿನಿಮಾ ನಿರ್ಮಾಣ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸಾಧನೆಗೈದವರನ್ನು ಗುರುತಿಸಿ ಜೀ ವಾಹಿನಿ ವತಿಯಿಂದ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಅದರಂತೆ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಈ ವರ್ಷ ಕಾಂತಾರ ಚಿತ್ರಕ್ಕಾಗಿ ಕ್ರಿಟಿಕ್ಸ್ ಚಾಯ್ಸ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಗೆದ್ದ ಖುಷಿಯಲ್ಲಿರುವ ಶೆಟ್ರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಟೀಮ್ ಕ್ರಿಟಿಕ್ಸ್ ಚಾಯ್ಸ್ನಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಕ್ಕಾಗಿ ಧನ್ಯವಾದಗಳು. ಈ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಸದಾ ಋಣಿ" ಎಂದು ಹೇಳಿದ್ದಾರೆ.
ಸಾಂಪ್ರದಾಯಿಕ ಲುಕ್ನಲ್ಲಿ ಶೆಟ್ರು: ಯಾವಾಗಲೂ ಅಷ್ಟೇ, ರಿಷಬ್ ಶೆಟ್ಟಿ ಅವ್ರು ಅಭಿಮಾನಿಗಳ ಮನಸ್ಸು ಗೆಲ್ಲುವುದು ಕೇವಲ ಪ್ರಶಸ್ತಿ ಪುರಸ್ಕಾರಗಳಿಂದಲ್ಲ. ಬದಲಾಗಿ ಅವರ ಸಾಂಪ್ರದಾಯಿಕ ಲುಕ್, ಭಾಷಣ ಕನ್ನಡಿಗರನ್ನು ವಿಶೇಷವಾಗಿ ಸೆಳೆಯುತ್ತದೆ. ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ರಿಷಬ್ ಕಪ್ಪು ಬಣ್ಣದ ಶರ್ಟ್ ಮತ್ತು ಬಿಳಿ ಪಂಚೆಯನ್ನು ಧರಿಸಿದ್ದರು. ಇದು ನೆಟ್ಟಿಗರಿಂದ ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅಭಿಮಾನಿಯೊಬ್ಬರು, "ನೀವು ಎಷ್ಟೇ ಎತ್ತರ ಬೆಳೆದರೂ ನಮ್ಮ ಸಂಸ್ಕೃತಿನಾ ಬಿಟ್ಟಿಲ್ಲ ಅನ್ನೋದೇ ನಮಗೆ ಖುಷಿಯ ವಿಚಾರ. ಪಂಚೆಯಲ್ಲಿ ಸಖತ್ತಾಗಿ ಕಾಣಿಸ್ತಿದ್ದೀರಾ ಶೆಟ್ರೇ" ಎಂದು ಹೇಳಿದ್ದಾರೆ. ಈ ರೀತಿಯ ಅನೇಕ ಕಾಮೆಂಟ್ಗಳು ಅವರ ಪೋಸ್ಟ್ಗೆ ಬಂದಿವೆ.
ಕಾಂತಾರ 2 ಬರವಣಿಗೆ ಪ್ರಾರಂಭ: ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಸಿನಿಮಾಗಳಲ್ಲಿ ಕಾಂತಾರ ಚಿತ್ರ ಕೂಡ ಒಂದು. ಸೂಪರ್ ಹಿಟ್ ಆಗಿದ್ದ ಸಿನಿಮಾದ ಸೀಕ್ವೆಲ್ ಮಾಡುವಂತೆ ಪ್ರೇಕ್ಷಕರು ರಿಷಬ್ ಜೊತೆ ಕೇಳಿಕೊಂಡಿದ್ದರು. ಅದರಂತೆ ಶೆಟ್ರು ಕಾಂತಾರ 2 ಸಿನಿಮಾದ ಬರವಣಿಗೆಯನ್ನು ಪ್ರಾರಂಭಿಸಿದ್ದಾರೆ. ಯುಗಾದಿ ಹಬ್ಬದ ದಿನದಂದು ಈ ಶುಭ ಸುದ್ದಿಯನ್ನು ಕನ್ನಡಿಗರಲ್ಲಿ ಸ್ವತಃ ನಟನೇ ಹಂಚಿಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆದರೆ ಸಿನಿಮಾ ಪಾತ್ರಧಾರಿಗಳ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.