ಸೌತ್ ಸೂಪರ್ ಸ್ಟಾರ್ ರಾಮ್ಚರಣ್ ಮತ್ತು ಉಪಾಸನಾ ದಂಪತಿ ಇತ್ತೀಚೆಗಷ್ಟೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮದುವೆಯಾದ 11 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಮೆಗಾ ಪ್ರಿನ್ಸೆನ್ಸ್ಗೆ 'ಕ್ಲಿಂ ಕಾರ ಕೊನಿಡೇಲಾ' ಎಂದು ಹೆಸರಿಡಲಾಗಿದೆ. ಇಂದು (ಜುಲೈ 20) ಉಪಾಸನಾ ಅವರ ಹುಟ್ಟುಹಬ್ಬ. ಅಲ್ಲದೇ ರಾಮಚರಣ್ ಮಗಳು ಹುಟ್ಟಿ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿದೆ. ಈ ವಿಶೇಷ ಸಂದರ್ಭದಲ್ಲಿ ರಾಮ್ಚರಣ್ ಹೆಂಡತಿ ಮತ್ತು ಮಗಳಿಗಾಗಿ ಸ್ಪೆಷಲ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಮಗು ಜನಿಸಿದಾಗ ಭಾವುಕರಾದ ಉಪಾಸನಾ ಮತ್ತು ರಾಮ್ಚರಣ್, ಅವರ ಸಂತೋಷದ ಕ್ಷಣಗಳು, ರಾಮ್ಚರಣ್ ತಮ್ಮ ಮಗುವನ್ನು ಮೊದಲ ಬಾರಿಗೆ ಕೈಯಲ್ಲಿ ಹಿಡಿದಾಗ ಅನುಭವಿಸಿದ ಭಾವನೆ ಎಲ್ಲವನ್ನೂ ವಿಡಿಯೋದಲ್ಲಿ ತೋರಿಸಲಾಗಿದೆ. ಜೊತೆಗೆ ದೃಶ್ಯದಲ್ಲಿ ಚಿರಂಜೀವಿ, ಅವರ ಪತ್ನಿ ಸುರೇಖಾ, ಉಪಾಸನಾ ಪೋಷಕರಾದ ಶೋಭನಾ ಕಾಮಿನೇನಿ ಮತ್ತು ಅನಿಲ್ ಕಾಮಿನೇನಿ ಕೂಡ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ಜೊತೆಗೆ ಉಪಾಸನಾ ಮತ್ತು ರಾಮ್ಚರಣ್ ಈ ಅದ್ಭುತ ಕ್ಷಣದ ಅನುಭವವನ್ನು ಹಂಚಿಕೊಂಡಿದ್ದಾರೆ.
'ನೀನು ನಮ್ಮ ಅತ್ಯುತ್ತಮ ಉಡುಗೊರೆ': ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಆರ್ಆರ್ಆರ್ ಸ್ಟಾರ್, "ಜನ್ಮದಿನದ ಶುಭಾಶಯಗಳು ಪ್ರಿಯ ಉಪ್ಸಿ ಮತ್ತು ಒಂದು ತಿಂಗಳ ಜನ್ಮದಿನದ ಶುಭಾಶಯಗಳು ಪ್ರಿಯ ಕಾರ. ನೀನು ನಮ್ಮ ಅತ್ಯುತ್ತಮ ಉಡುಗೊರೆ" ಎಂದು ಕ್ಯಾಪ್ಶನ್ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಉಪಾಸನಾ, "ಎಂಟು ತಿಂಗಳು ಒಂದೆಡೆ ಫ್ರೀಜ್ ಮಾಡಿದ ಹಾಗಿತ್ತು. ನಾನು ಎಲ್ಲಿಯೂ ಚಲಿಸುವಂತಿರಲಿಲ್ಲ. ನಾನು ಎಲ್ಲದರಲ್ಲೂ ಭಾವುಕಳಾಗುತ್ತಿದ್ದೇನೆ. ತಾಯಿಯಾಗಿರುವುದು ನನ್ನನ್ನು ಪೂರ್ಣಗೊಳಿಸಿದೆ ಎಂದು ಭಾವಿಸುತ್ತೇನೆ. ಹಾಗಾಗಿ ಜನರು ಮಗುವನ್ನು ಜಾಸ್ತಿ ಪ್ರೀತಿ ಮಾಡುತ್ತಾರೆ. ಎಲ್ಲರಿಂದಲೂ ಉತ್ತಮ ಭಾವನೆಯನ್ನೇ ನೀಡಿದೆ. ಇದು ತುಂಬಾ ಸುಂದರವಾಗಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ" ಎಂದು ಹೇಳಿದ್ದಾರೆ.