ಉಡುಪಿ ಶ್ರೀಕೃಷ್ಣ ಮಠದ ಸ್ಥಳದ ವಿಚಾರವಾಗಿ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ಕೂಡ ನೀಡಿದ್ದರು. ಇದೀಗ ಕನ್ನಡದ ಬೇಡಿಕೆಯ ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಮಿಥುನ್ ರೈ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿದೆ.
ರಕ್ಷಿತ್ ಶೆಟ್ಟಿ ಟ್ವೀಟ್ ಏನು?: ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೆಸರು ಹೇಳದೇ ಉಡುಪಿ ಶ್ರೀಕೃಷ್ಣ ಮಠ ಕುರಿತು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ''ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಯಾವ ಮಾಹಿತಿಯ ಅರಿವಿಲ್ಲದೇ ಸಾರ್ವಜನಿಕವಾಗಿ ಮೂರ್ಖರಂತೆ ಮಾತನಾಡೋದು ಏಕೆ?'' ಎಂದು ತರಾಟೆಗೆ ತೆಗೆದುಕೊಂಡಿದ್ದರು. ಟ್ವೀಟ್ನಲ್ಲಿ ರಕ್ಷಿತ್ ಶೆಟ್ಟಿ ಅವರು ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರ ಹೆಸರು ಉಲ್ಲೇಖಿಸದಿದ್ದರೂ, ಅದು ಅವರಿಗೆ ಕೊಟ್ಟ ಟಾಂಗ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪರ-ವಿರೋಧ ಚರ್ಚೆಗೆ ವೇದಿಕೆ:ಸಾಮಾನ್ಯವಾಗಿ ರಕ್ಷಿತ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣ ಬಳಸುವುದು, ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಬಹಳ ಕಡಿಮೆ. ರಾಜಕೀಯ ವ್ಯಕ್ತಿಗಳ ಹೇಳಿಕೆಗಳಿಗಂತೂ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಅವರ ವೈಯಕ್ತಿಕ ವಿವಾದಗಳು ಕೆಲ ಕಾಲ ಸದ್ದು ಮಾಡಿದ್ದ ಸಂದರ್ಭದಲ್ಲಿಯೂ ನಟ ಮೌನ ವಹಿಸಿದ್ದರು. ಇದೀಗ ಶ್ರೀಕೃಷ್ಣ ಮಠದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ.
ಮಿಥುನ್ ರೈ ಹೇಳಿದ್ದೇನು?: ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪುತ್ತಿಗೆಯಲ್ಲಿ ನೂರಾನಿ ಮಸೀದಿಯಲ್ಲಿ 'ನಮ್ಮೂರ ಮಸೀದಿ ನೋಡಬನ್ನಿ' ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾಗಿಯಾಗಿ ಸೌಹಾರ್ದತೆಯ ಬಗ್ಗೆ ಮಾತನಾಡಿದ್ದರು. ಕರಾವಳಿ ಸೌಹಾರ್ದತೆಯ ಇತಿಹಾಸ ಹೊಂದಿದೆ. ಬಪ್ಪನಾಡು ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತಾರಿನಲ್ಲಿ ಮುಸ್ಲಿಂ ಅರ್ಚಕರಿಂದ ಕೊರಗಜ್ಜನ ಕಟ್ಟೆಗೆ ಪೂಜೆ ನಡೆಯುತ್ತಿದೆ. ಶ್ರೀಕೃಷ್ಣ ಮಠಕ್ಕೂ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗಾಕ್ಕೆ ಎಲ್ಲಾ ಧರ್ಮದವರು ಬರುತ್ತಾರೆ ಎಂದು ತಿಳಿಸಿದ್ದರು.