ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜೈಲರ್'. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಎರಡು ವರ್ಷಗಳ ಬಳಿಕ ಆ್ಯಕ್ಷನ್ ಕಾಮಿಡಿ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ಗೆ ಮರಳಲು ತಲೈವಾ ರೆಡಿಯಾಗಿದ್ದಾರೆ. ರಜನಿಕಾಂತ್ ನಟನೆಯ ಕೊನೆಯ ಎರಡು ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಎಆರ್ ಮುರುಗದಾಸ್ ಅವರ ದರ್ಬಾರ್ ಮತ್ತು ಶಿವ ಅವರ ಅಣ್ಣಾತ್ತೆ ಸಿನಿಮಾಗಳಿಂದ ನಿರಾಸೆಗೊಂಡಿರುವ ಅಭಿಮಾನಿಗಳು 'ಜೈಲರ್' ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ.
ಚಿತ್ರ ನಿರ್ಮಾಪಕರು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುವ ಸಲುವಾಗಿ ಶುಕ್ರವಾರ ಸಂಜೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮ ಆಯೋಜಿಸಿದ್ದರು. ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು. ರಜನಿಕಾಂತ್ ಅವರ ಉಪಸ್ಥಿತಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಈವೆಂಟ್‌ನ ಹಲವು ಫೋಟೋ, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೂಪರ್ ಸ್ಟಾರ್ ಸ್ಟೇಡಿಯಂಗೆ ಎಂಟ್ರಿ ಕೊಡುತ್ತಿದ್ದಂತೆ ಪ್ರೇಕ್ಷಕರು "ತಲೈವಾ" ಎಂದು ಕೂಗಿದ್ದಾರೆ. ಸೂಟು ಬೂಟ್ ಧರಿಸಿದ ಹಲವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ವೇದಿಕೆಗೆ ವಿಶೇಷವಾಗಿ ಸ್ವಾಗತಿಸಿದ್ದು, ತಲೈವಾ ಎಂಟ್ರಿ ಅದ್ಭುತವಾಗಿತ್ತು.
ಈವೆಂಟ್‌ನಲ್ಲಿ 72ರ ಹರೆಯದ ನಟ, ಪಾ ರಂಜಿತ್ ನಿರ್ದೇಶನದ 2018ರ 'ಕಾಲಾ' ಸಿನಿಮಾದ ನೋಟವನ್ನು ನೆನಪಿಸಿದರು. ಬ್ಲ್ಯಾಕ್ ಡ್ರೆಸ್ ತೊಟ್ಟು ಪವರ್ಫುಲ್ ನೋಟ ಬೀರಿದರು. ಪ್ರೇಕ್ಷಕರು ಅವರನ್ನು ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ಸ್ವಾಗತಿಸಿದ್ದು, ಪ್ರತಿಭಾನ್ವಿತ ನಟನು ನಗುಮೊಗದಲ್ಲಿ ಕಂಗೊಳಿಸಿದರು. ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು, ಪ್ರೇಕ್ಷಕರತ್ತ ತಿರುಗಿ ಕೈ ಬೀಸಿದರು. ನಂತರ ಚಿತ್ರತಂಡದತ್ತ ತೆರಳಿ ಮಾತನಾಡಿದರು.