ಜೀವನದಲ್ಲಿ 'ರಾಜಯೋಗ' ಬಂತೆಂದರೆ ಆತ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ ಎನ್ನುವ ಮಾತಿದೆ. ಅದೇ ಕಾನ್ಸೆಪ್ಟ್ ಮೇಲೆ ನಿರ್ಮಾಣಗೊಂಡಿರುವ ಸಿನಿಮಾ 'ರಾಜಯೋಗ'. ರಾಮಾ ರಾಮಾ ರೇ ಚಿತ್ರದಲ್ಲಿ ಗಮನ ಸೆಳೆದಿದ್ದ ಧರ್ಮಣ್ಣ ಕಡೂರು 'ರಾಜಯೋಗ' ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಲಿಂಗರಾಜ ಉಚ್ಚಂಗಿದುರ್ಗ ಮಾತನಾಡಿ, ನನ್ನ ನಿರ್ದೇಶನದ ಮೊದಲ ಚಿತ್ರವಿದು. ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದೊಳ್ಳೆ ಸಿನಿಮಾ ಕೊಡುತ್ತಿದ್ದೇವೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ರಾಜಯೋಗ ಬಂದೇ ಬರುತ್ತದೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು, ಶ್ರೀರಂಗಪಟ್ಟಣದ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯನ್ನು ಹೇಳಿದ್ದೇವೆ. ಕೆಎಎಸ್ ಪರೀಕ್ಷೆ ಬರೆಯಲು ಹೊರಟ ನಾಯಕ, ಬರೆಯುತ್ತಾನೋ - ಇಲ್ಲೋ? ಅನ್ನೋದೇ ಕಾನ್ಸೆಪ್ಟ್. ಜೋತಿಷ್ಯ ಸುಳ್ಳಲ್ಲ, ಆದ್ರೆ ಅದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಕೊನೆಗೆ ಮಗನ ಮೂಲಕವೇ ತಂದೆಗೆ ಜ್ಞಾನೋದಯವಾಗುತ್ತದೆ. ಸೀರಿಯಸ್ ಕಂಟೆಂಟ್ ಅನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಈಗಾಗಲೇ ಟ್ರೇಲರ್, ಸಾಂಗ್ಸ್ ಹಿಟ್ ಆಗಿವೆ. ಅದೇ ರೀತಿ ಜನ ಚಿತ್ರವನ್ನೂ ಗೆಲ್ಲಿಸುತ್ತಾರೆಂಬ ಭರವಸೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಧರ್ಮಣ್ಣ ಕಡೂರು ಮಾತನಾಡಿ, ತುಂಬಾ ಓದಿಕೊಂಡಿರುವವನ ಜೀವನ ಹೇಗಿರುತ್ತದೆ ಎಂದು ಹೇಳುವ ಪಾತ್ರ ನನ್ನದು. ಇದರಲ್ಲಿ ಕಾಮಿಡಿ, ಎಮೋಷನ್ ಎಲ್ಲವೂ ಸೇರಿದೆ. ಪ್ರತಿ ಪಾತ್ರಕ್ಕೂ ಸಮಾನ ಅವಕಾಶವಿದೆ ಎಂದರು.
ನಟಿ ನಿರೀಕ್ಷಾ ರಾವ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ವಿದ್ಯಾವಂತೆಯಾದ ನಾನು ಗೃಹಿಣಿಯಾಗಿ ಕುಟುಂಬವನ್ನು ಹೇಗೆ ನಿಭಾಯಿಸುತ್ತೇನೆ ಎಂಬುದು ಚಿತ್ರದಲ್ಲಿದೆ. ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ ಎಂದು ತಿಳಿಸಿದರು.
ಸಿನಿಮಾ ವಿತರಣೆ ಜವಾಬ್ದಾರಿ ವಹಿಸಿಕೊಂಡಿರುವ ಮಾರ್ಸ್ ಸುರೇಶ್ ಮಾತನಾಡಿ, ಈ ಸಿನಿಮಾವನ್ನು ನಾನು ಈಗಾಗಲೇ ವೀಕ್ಷಿಸಿದ್ದೇನೆ. ಪ್ರೇಕ್ಷಕರು ನೋಡಲೇಬೇಕಾದ ಚಿತ್ರ. ಪ್ರಸ್ತುತ ನಗರೀಕರಣ ಎಷ್ಟು ವೇಗವಾಗಿದೆ ಅಂದ್ರೆ, ವರ್ಷ ಕಳೆದರೆ ನಮ್ಮ ಹಳ್ಳಿಯನ್ನು ನಾವೇ ನಂಬಲಾಗದಷ್ಟು ಬದಲಾಗಿರುತ್ತದೆ. ಹೀಗೆ ಹಲವು ಸಂದೇಶಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಹೇಳಿದರು.