'ರಾಘವೇಂದ್ರ ಸ್ಟೋರ್ಸ್' ಈ ಹೆಸರು ಕೇಳುತ್ತಿದ್ದಂತೆ ಮಲ್ಲೇಶ್ವಂನಲ್ಲಿರುವ 50 ವರ್ಷಗಳ ಇತಿಹಾಸ ಹೊಂದಿರುವ ಹೋಟೆಲ್ ನೆನಪಾಗುತ್ತದೆ. ಈ ಹೆಸರಿನ ಟೈಟಲ್ ಇಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣವಾಗಿರೋದು ನಿಮಗೂ ತಿಳಿದಿರುವ ವಿಚಾರ. ನವರಸ ನಾಯಕ ಜಗ್ಗೇಶ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಕಾಮಿಡಿ ಜೊತೆ ಜೊತೆಗೆ ಸಮಾಜಿಕ ಮೌಲ್ಯಗಳನ್ನು ಒಳಗೊಂಡಿರುವ ಸಿನಿಮಾ ಎಂಬುದು ಸ್ಯಾಂಡಲ್ವುಡ್ ಸಿನಿಗಣ್ಯರ ಮಾತು. ಕುಟುಂಬ ಸಮೇತ ಬಂದು ನೋಡಬಹುದಾದ ಚಿತ್ರವೆಂದು ನಟ ನಟಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಳೆ ರಾಜ್ಯಾದ್ಯಂತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಬಿಡುಗಡೆಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಸಿನಿಮಾ ಸೆಲೆಬ್ರಿಟಿಗಳಿಗಾಗಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು. ಈ ಶೋಗೆ ಸೆಲೆಬ್ರಿಟಿಗಳಾದ ರಿಷಬ್ ಶೆಟ್ಟಿ ದಂಪತಿ, ರಕ್ಷಿತ್ ಶೆಟ್ಟಿ, ಕೋಮಲ್, ಯುವ ರಾಜ್ಕುಮಾರ್, ಸಪ್ತಮಿ ಗೌಡ, ಅಶ್ವಿನಿ ಪುನೀತ್ ರಾಜ್ಕುಮಾರ್, ಧೀರೇನ್ ರಾಮ್ ಕುಮಾರ್, ನವೀನ್ ಶಂಕರ್ ಸೇರಿದಂತೆ ಸಾಕಷ್ಟು ಸಿನಿ ತಾರೆಯರು ಆಗಮಿಸಿ ಸಿನಿಮಾ ಮೆಚ್ಚಿಕೊಂಡಿದ್ದಾರೆ.
ರಾಘವೇಂದ್ರ ಸ್ಟೋರ್ಸ್ ಹೋಟೆಲ್ ಮಾಲೀಕನಾಗಿ ಹಿರಿಯ ನಟ ದತ್ತಣ್ಣ ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರ ಮಗನಾಗಿ ಜಗ್ಗೇಶ್ ಹಯವದನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಯವದನನ ವಯಸ್ಸು 40 ದಾಟಿದರೂ ಮದುವೆ ಆಗಿಲ್ಲ. ಸದಾ ಮದುವೆ ಚಿಂತೆಯಲ್ಲೇ ಇರುವ ಹಯವದನ ಮದುವೆ ಆಗಲು ಏನೆಲ್ಲಾ ಕಷ್ಟ ಪಡುತ್ತಾನೆ, ವಯಸ್ಸಾದ ಮೇಲೆ ಹುಡುಗಿ ಏಕೆ ಸಿಗೋಲ್ಲ, ಕೊನೆಗೆ ಹಯವದನನಿಗೆ ಹುಡುಗಿ ಸಿಕ್ತಾಳಾ? ಹಯವದನ ಮದುವೆ ಆಗ್ತಾನಾ? ಮದುವೆ ಆದ್ಮೇಲೆ ಮಕ್ಕಳು ಎಷ್ಟು ಮುಖ್ಯ? ಎಂಬ ವಿಷಯಗಳನ್ನು ಒಳಗೊಂಡಿದೆ. ಫ್ಯಾಮಿಲಿ ಎಮೋಷನ್ ಜೊತೆ ಅನಾಥ ಮಕ್ಕಳ ಬಗ್ಗೆ ಈ ಸಿನಿಮಾ ಸಂದೇಶ ಕೊಡಲಿದೆ.