ಬೆಂಗಳೂರು: ಪುನೀತ್ ರಾಜ್‌ಕುಮಾರ್ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಅಚ್ಚುಮೆಚ್ಚಿನ ನಾಯಕ. ಅಗಲಿದ ಅಪ್ಪು ನೆನೆದಷ್ಟು ನಗುವಿನ ಬಿಗಿದಪ್ಪುಗೆಯ ಬಾಂಧವ್ಯ ಬೆಸೆಯುತ್ತೆ. ಅಪ್ಪು ಅಗಲಿ ಒಂದು ವರ್ಷವಾದರೂ, ಅಸಂಖ್ಯಾತ ಅಭಿಮಾನಿಗಳ ಪಾಲಿಗೆ ಇನ್ನೂ ಅವರು ಅಜಾರಮರ. ಸಿನಿಮಾ ನಾಯಕ ಅಪ್ಪು ಮನೋರಂಜನೆ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಸಿನಿಮಾಗಳನ್ನು ನೀಡುವ ಮೂಲಕ ಸಮಾಜಮುಖಿ ನಾಯಕನಾಗಿ ಹೊರ ಹೊಮ್ಮಿದ್ದರು.
ಪುನೀತ್ ರಾಜ್‍ಕುಮಾರ್ ಕರುನಾಡ ಸಿನಿ ಅಭಿಮಾನಿಗಳ ಪಾಲಿನ ರಾಜಕುಮಾರ. ಜನರ ಪಾಲಿನ ಪ್ರೀತಿಯ ಅಪ್ಪು. ಅಚ್ಚುಮೆಚ್ಚಿನ ಅಪ್ಪು ಅಗಲಿ ವರ್ಷ ಕಳೆದಿದೆ. ಆದರೂ ಪುನೀತ್ ರ ನೆನಪು ಮಾತ್ರ ಇನ್ನೂ ಜೀವಂತ. ಅಪ್ಪು ಎರಡು ತಿಂಗಳ ಮಗುವಾಗಿದ್ದಾಗಲೇ ಬೆಳ್ಳಿ ಪರದೆ ಮೇಲೆ ಮಿಂಚಿದ್ದರು. ಸಿನಿಮಾ ಲೋಕದಲ್ಲಿ ಅದ್ಬುತ ನಟನೆಯ ಮೂಲಕ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣ ಉಣ ಬಡಿಸುತ್ತಿದ್ದ ಪುನೀತ್ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳನ್ನು ಮಾಡುವ ಮೂಲಕ ಸಮಾಜಮುಖಿ ಎನ್ನಿಸಿಕೊಂಡಿದ್ದರು.
ನಿಜ ಜೀವನದಲ್ಲಿ ಹಲವರಿಗೆ ಪ್ರೇರಕ ಶಕ್ತಿ: ಅಪ್ಪ, ವರನಟ ರಾಜ್ ಕುಮಾರ್ ಹಾಕಿಕೊಟ್ಟ ಮೇರುಪಂಕ್ತಿಯಲ್ಲೇ ನಡೆದ ಪುನೀತ್ ಕಮರ್ಷಿಯಲ್ ಸಿನಿಮಾಗಳ ನಾಯಕನಾಗಿದ್ದಷ್ಟೇ ಅಲ್ಲ, ಸಿನಿಮಾ ಮೂಲಕ ಸಾಮಾಜಕ್ಕೆ ಒಂದು ಸಂದೇಶ ನೀಡುವ ಕೆಲಸವನ್ನೂ ಜವಾಬ್ದಾರಿಯುತವಾಗಿ ಮಾಡುತ್ತಿದ್ದರು. ತಮ್ಮ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಸಂದೇಶದ ಜತೆಗೆ ನವಿರಾದ ಪ್ರೇಮಕಥೆಯನ್ನೂ ತೆರೆಯ ಮೇಲೆ ಅಚ್ಚುಕಟ್ಟಾಗಿ ನಟಿಸುವುದರಲ್ಲಿ ಅಪ್ಪು ಯಾವಾಗಲೂ ಮುಂದು. ಅದಕ್ಕೆ ಸಿನಿ ಜೀವನದ ಪಯಣ ಸ್ಮರಣೀಯವಾಗಿ, ನಿಜ ಜೀವನದಲ್ಲಿ ಹಲವರಿಗೆ ಪ್ರೇರಕ ಶಕ್ತಿಯಾಗಿರುವುದು.
2015ರಲ್ಲಿ ಬಂದ ಮೈತ್ರಿ ಸಿನಿಮಾ. ಅಪ್ಪುವಿನ ಸಮಾಜಮುಖಿಯ ಚಿತ್ರದಲ್ಲೊಂದಾಗಿದೆ. ಗಿರಿರಾಜ್ ನಿರ್ದೇಶಿತ ಈ ಸಿನಿಮಾದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡತನದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಲುಕಿ, ಪರಿಸ್ಥಿತಿಗೆ ಬಲಿಯಾಗಿ ರಿಮ್ಯಾಂಡ್ ಹೋಮ್ ಸೇರಿರುವನ ಕಥೆಯಾಗಿತ್ತು. ನಿಜ ಜೀವನದ ಈ ಸಿನಿಮಾ ಕಥಾನಕದಲ್ಲಿ ಅಪ್ಪು ಮನಮುಟ್ಟುವಂತೆ ಅಭಿನಯಿಸಿದ್ದರು.
ಸಮಾಜಮುಖಿ ಸಿನಿಮಾದಲ್ಲಿ ನಟಿಸಿದ್ರು ಅಪ್ಪು: 2017ರಲ್ಲಿ ಬಿಡುಗಡೆಯಾದ ರಾಜಕುಮಾರ ಸಿನಿಮಾ ಅಪ್ಪುವಿನ ಮತ್ತೊಂದು ಸಮಾಜಮುಖಿ ಸಿನಿಮಾವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ ಸಿನಿಮಾ ಹೆತ್ತ ತಂದೆ-ತಾಯಿಯನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸುವ ಕಥನಕವನ್ನು ಮನೋಜ್ಞವಾಗಿ ಬಿಡಿಸಲಾಗಿತ್ತು. ಹೆತ್ತು ಹೊತ್ತ ಪೋಷಕರನ್ನು ಮಕ್ಕಳು ಅನಾಥಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶವನ್ನು ಅಪ್ಪು ಈ ಸಿನಿಮಾ ಮೂಲಕ ನೀಡಿದ್ದರು. ಈ ಸಿನಿಮಾ ನೂರು ದಿನ ಯಶಸ್ವಿ ಪ್ರದರ್ಶನಗೊಂಡಿತ್ತು.
'ಯುವರತ್ನ' ಶಿಕ್ಷಣ ವ್ಯವಸ್ಥೆ ಬಗ್ಗೆ ದೊಡ್ಡ ಮಟ್ಟದಲ್ಲಿ ಬೆಳಕು ಚೆಲ್ಲಿದ ಸಿನಿಮಾ. ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಪಾಠ ಹೇಳುವ ಗುರುವಿನ ಪಾತ್ರದಲ್ಲಿ ನಟಿಸಿದ್ದರು. ಸರ್ಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಿಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಮಾಜದ ಕಾಳಜಿ ಇದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ಕುರಿತು ಸಿನಿಮಾದಲ್ಲಿ ವಿವರಿಸಲಾಗಿದೆ. ಸಿನಿಮಾದಲ್ಲಿ ಸದ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಮನಮುಟ್ಟುವಂತೆ ತೋರಿಸಲಾಗಿದೆ.