ಬಹು ತಾರೆಯರ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಕಾಯುತ್ತಿದ್ದ 'ಪ್ರಾಜೆಕ್ಟ್ ಕೆ' ಚಿತ್ರದ ಫಸ್ಟ್ ಗ್ಲಿಂಪ್ಸ್ ಅನಾವರಣಗೊಂಡಿದೆ. ಚಿತ್ರತಂಡ ತಮ್ಮ ಬಹುನಿರೀಕ್ಷಿತ ಸಿನಿಮಾಗೆ 'ಕಲ್ಕಿ 2898 ಎಡಿ' ('Kalki 2898 AD') ಎಂದು ಹೆಸರಿಟ್ಟಿದೆ.
ಜಗತ್ತನ್ನು ಕತ್ತಲೆ ಆವರಿಸಿದಾಗ ಶಕ್ತಿಯೊಂದು ಹೊರಹೊಮ್ಮುತ್ತದೆ. ಅಂತ್ಯ ಶುರುವಾಗಲಿದೆ ಎಂಬ ಹಿನ್ನೆಲೆಯಲ್ಲಿ ಚಿತ್ರಕಥೆ ಸಾಗಲಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಗ್ಲಿಂಪ್ಸ್ನಲ್ಲಿ ಸಿನಿಮಾ ಕುರಿತು ಭಾರಿ ನಿರೀಕ್ಷೆ ಮೂಡಿಸುವ ಸಾಹಸ ದೃಶ್ಯಗಳಿವೆ. ದೃಶ್ಯಗಳು ರೋಮಾಂಚಕವಾಗಿದ್ದು, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ನೋಟ ಅದ್ಭುತವಾಗಿದೆ ಎಂದು ಸಿನಿಮಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ನಡೆದ ಪ್ರತಿಷ್ಠಿತ 'ಸ್ಯಾನ್ ಡಿಯಾಗೋ ಕಾಮಿಕ್ ಕಾನ್' ಸಮಾರಂಭದಲ್ಲಿ ಚಿತ್ರತಂಡ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸಿ, ಚಿತ್ರದ ಅಂತಿಮ, ಅಧಿಕೃತ ಶೀರ್ಷಿಕೆಯನ್ನು ಬಹಿರಂಗಗೊಳಿಸಿತು. ಈ ಕುರಿತ ವಿಡಿಯೋವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ವಿಶ್ವದ ಪ್ರತಿಷ್ಟಿತ ಸಮಾರಂಭದಲ್ಲಿ ಸಿನಿಮಾ ಪ್ರಚಾರ ಮಾಡಿರುವ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ.
ಕಾರ್ಯಕ್ರಮದಲ್ಲಿ ಚಿತ್ರತಂಡದಿಂದ ನಾಯಕ ನಟ ಪ್ರಭಾಸ್, ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್, ನಿರ್ಮಾಪಕ ಅಶ್ವಿನಿದತ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು. ದಗ್ಗುಬಾಟಿ ಕಾಮಿಕ್ ಕಾನ್ ಈವೆಂಟ್ನಲ್ಲಿ ತಮ್ಮ ಮುಂಬರುವ ಯೋಜನೆಗಳ ಕುರಿತಾಗಿ ಘೋಷಿಸಿದರು.
ಈವೆಂಟ್ನಲ್ಲಿ 'ರೈಡರ್ಸ್' ಎಂಬ ವಿಶೇಷ ಸೂಟ್ ಧರಿಸಿದ್ದ ಜನರು ಚಲನಚಿತ್ರ ಪ್ರಚಾರ ಮಾಡಿದ್ದಾರೆ. ಅವರು ಪ್ರಾಜೆಕ್ಟ್-ಕೆ ಅಥವಾ ಕಲ್ಕಿ 2898 ಎಡಿ ಸಿನಿಮಾದ ವಿಲನ್ಗಳಾಗಿದ್ದು, ಸಿನಿಮಾ ಪ್ರಚಾರ ಮಾಡಿದ್ದಾರೆ. ಈ ಮೂಲಕ ಯುಎಸ್ನ ಸ್ಯಾನ್ ಡಿಯಾಗೋದಲ್ಲಿ ನಡೆದ ಕಾಮಿಕ್ ಕಾನ್ ಕಾರ್ಯಕ್ರಮದ ಆಕರ್ಷಣೀಯ ವಿಷಯವಾದರು. ನೀಲಿ ಬಣ್ಣದ ಸೂಟ್ ಧರಿಸಿ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಭಾಸ್ ತಮ್ಮ ಅಭಿಮಾನಿಗಳನ್ನು ಮುದಗೊಳಿಸಿದ್ದಾರೆ.
ಇದನ್ನೂ ಓದಿ:ಒಂದೇ ಫ್ರೇಮ್ನಲ್ಲಿ ಸೌತ್ ಸೂಪರ್ಸ್ಟಾರ್ಸ್.. ಅಮೆರಿಕದಲ್ಲಿ ಕಮಲ್ ಹಾಸನ್, ಪ್ರಭಾಸ್ ಮಿಂಚಿಂಗ್
ಪ್ರಭಾಸ್ ಅಭಿಮಾನಿಗಳ ರ್ಯಾಲಿ: ಸೂಪರ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಸರ್ಪ್ರೈಸ್ ಕೂಡ ಕೊಟ್ಟಿದ್ದಾರೆ. ಅಮೆರಿಕದ ಮಿಸೌರಿಯ ಸೈಂಟ್ ಲೂಯಿಸ್‌ನಿಂದ ಈವೆಂಟ್ ನಡೆದ ಸ್ಥಳಕ್ಕೆ ತಲುಪಿದ್ದಾರೆ. ಪ್ರಾಜೆಕ್ಟ್-ಕೆ ಟೀ ಶರ್ಟ್ ಧರಿಸಿ, ಬೃಹತ್ ಕಾರ್ ರ್ಯಾಲಿ ಆಯೋಜಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಚಲಚಿತ್ರ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬ್ಯಾನರ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಇದನ್ನು ನೋಡಿದ ಅಭಿಮಾನಿಗಳು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಚಿತ್ರತಂಡ.. ಸ್ಟೈಲಿಶ್ ಲುಕ್ನಲ್ಲಿ ಗಮನ ಸೆಳೆದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್
ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. 600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ನಟಿಸಿದ್ದಾರೆ. ಜನವರಿ 12, 2024ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.