ಬಹು ನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ ಮೊದಲ ಭಾಗ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ, ನಟ ವಿಕ್ರಮ್, ಜಯಮ್ ರವಿ, ಕಾರ್ತಿ, ತ್ರಿಷಾ, ಶೋಬಿತಾ, ಪ್ರಕಾಶ್ ರಾಜ್ ಸೇರಿದಂತೆ ಅನೇಕ ಘಟಾನುಘಟಿಗಳ ತಾರಾ ಬಳಗವಿದೆ. ಬಹಳ ವರ್ಷಗಳ ಬಳಿಕ ಮಾಜಿ ವಿಶ್ವ ಸುಂದರಿ, ನಟಿ ಐಶ್ವರ್ಯಾ ರೈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು ಹೆಚ್ಚಿನ ಹೈಲೈಟ್ ಆಗಿದೆ. ಇನ್ನೂ ಮಣಿರತ್ನಂ ಹಾಗೂ ಐಶ್ವರ್ಯಾ ಒಟ್ಟಾಗಿ ಕೆಲಸ ಮಾಡುತ್ತಿರುವ ನಾಲ್ಕನೇ ಸಿನಿಮಾ ಇದಾಗಿದ್ದು ನೀರೀಕ್ಷೆ ಬಹಳಾನೇ ಹೆಚ್ಚಾಗಿತ್ತು.
ಪೊನ್ನಿಯಿನ್ ಸೆಲ್ವನ್ ಸಿನಿಮಾ ಬಿಡುಗಡೆ - ಸಿನಿಪ್ರಿಯರ ಸಂಭ್ರಮಾಚರಣೆ ಕಲ್ಕಿ ಕೃಷ್ಣಮೂರ್ತಿ ಅವರ 1955ರಲ್ಲಿ ಬರೆದ ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಇಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಎರಡು ಭಾಗಗಳಲ್ಲಿ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಡಿ ಬರಲಿದೆ. ಮೊದಲ ಭಾಗ ಇಂದು ಬಿಡುಗಡೆ ಆಗಿದ್ದು, 500 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿ ಇದೆ.
ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಈ ಚಿತ್ರ 10ನೇ ಶತಮಾನದ ಚೋಳ ಸಾಮ್ರಾಜ್ಯ ಕುರಿತ ಕಥೆಯಾಗಿದೆ. ಸಿಂಹಾಸನವನ್ನು ವಶಪಡಿಸಿಕೊಳ್ಳಲು ಪಡೆಗಳು ಪಿತೂರಿ ನಡೆಸಿದ ವೇಳೆ ರಾಜ ಕುಟುಂಬಗಳ ನಡುವಿನ ಅಧಿಕಾರದ ಹೋರಾಟವನ್ನು ಈ ಚಲನಚಿತ್ರ ತಿಳಿಸಿದೆ.
ಸಿನಿಮಾ ಬಿಡುಗಡೆ ಬಗ್ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳ ಎದುರು ಸಂಭ್ರಮಾಚರಿಸಿದ್ದಾರೆ. ಅದರಲ್ಲೂ ಚೆನ್ನೈನ ಕೋಯಂಬೇಡು ಚಿತ್ರಮಂದಿರದ ಹೊರಗೆ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಿನಿಮಾ ಡೋಲು ಬಾರಿಸುವ ಮೂಲಕ ಕುಣಿದು ಕುಪ್ಪಳಿಸಿದರು.
ಇದನ್ನೂ ಓದಿ:ಕಾನನದೊಳಗಿನ ದಂತಕಥೆ..ಕಾಂತಾರದಲ್ಲಿ ಕರಾವಳಿ ಸೊಗಡು - ಹೊಸ ಅವತಾರದಲ್ಲಿ ರಿಶಬ್ ಶೆಟ್ಟಿ ಅಬ್ಬರ
ಮಧುರೈನಲ್ಲಿ ಅಭಿಮಾನಿಗಳು ನಟ ಕಾರ್ತಿ ಕಟೌಟ್ಗೆ ಕ್ಷೀರಾಭಿಷೇಕ ಮಾಡಿ, ಹಾರ ಹಾಕಿ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುದ್ದಿವಾಹಿನಿಯೊಂದರ ಜೊತೆ ತಮಿಳುನಾಡಿನ ಚಲನಚಿತ್ರ ಪ್ರೇಕ್ಷಕರು ಮಾತನಾಡುತ್ತಾ, ಪೊನ್ನಿಯಿನ್ ಸೆಲ್ವನ್ ಬಹಳ ಚೆನ್ನಾಗಿದೆ. ತಮಿಳು ಚಿತ್ರರಂಗವನ್ನು ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಹೇಳಿದರು. ಅಲ್ಲದೇ, ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರವಿವರ್ಮನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದು ಹೇಳಿದ್ದಾರೆ. ಬಾಹುಬಲಿ ಸಿನಿಮಾಗೆ ಹೋಲಿಸದೇ ನೋಡಿದರೆ, ಇದು ಉತ್ತಮ ಸಿನಿಮೀಯ ಅನುಭವವಾಗಲಿದೆ ಎಂದು ಚಲನಚಿತ್ರ ಪ್ರೇಮಿಗಳು ಹೇಳಿದ್ದಾರೆ.
ಚಿತ್ರದಲ್ಲಿ ವಿಕ್ರಮ್ ಅವರು ಆದಿತ್ಯ ಕರಿಕಾಳನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರೈ ಬಚ್ಚನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಜುವೂರಿನ ರಾಜಕುಮಾರಿ ರಾಣಿ ನಂದಿನಿ ಮತ್ತು ಮಂದಾಕಿನಿ ದೇವಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಕಾರ್ತಿ ವಂತಿಯತೇವನ ಪಾತ್ರ, ತ್ರಿಷಾ ಕುಂದವೈ ಪಾತ್ರದಲ್ಲಿ, ರವಿ ಅರುಣ್‌ಮೋಳಿ ವರ್ಮನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಕಾಂತಾರ ಸ್ಪೆಷಲ್ ಶೋ - ಸಿನಿಮಾ ಮೆಚ್ಚಿದ ಸಿನಿರಂಗ
ಹೈ ಬಜೆಟ್ನಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಗ್ರಾಫಿಕ್ಸ್, ಸಾಹಸ ಸನ್ನಿವೇಶ ಮುಂತಾದವುಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ. ಎಲ್ಲ ಕಲಾವಿದರ ನಟನೆಯನ್ನೂ ಅಭಿಮಾನಿಗಳು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ಈ ಸಿನಿಮಾವನ್ನು 'ಬಾಹುಬಲಿ' ಚಿತ್ರಕ್ಕೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಅದು ತಪ್ಪು ಎಂಬುದು ತಮಿಳು ಸಿನಿಪ್ರಿಯರ ಅಭಿಪ್ರಾಯ. ಎರಡೂ ಸಿನಿಮಾಗಳು ಬೇರೆ ಬೇರೆ ರೀತಿ ಇವೆ ಎಂದಿದ್ದಾರೆ. ಪ್ರೇಕ್ಷಕರು ಮಾತ್ರವಲ್ಲದೇ ಚಿತ್ರರಂಗದವರೂ ಕೂಡ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.