ಕರ್ನಾಟಕ

karnataka

ETV Bharat / entertainment

ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೇಲರ್​ ರಿಲೀಸ್​: ರಾಣಿಯರಾಗಿ ಮಿಂಚಿದ ಐಶ್ವರ್ಯಾ ರೈ, ತ್ರಿಶಾ - ಲೈಕಾ ಪ್ರೊಡಕ್ಷನ್ಸ್‌

ಮಣಿರತ್ನಂ ನಿರ್ದೇಶಿಸಿದ ಪೊನ್ನಿಯನ್​ ಸೆಲ್ವಂ ಸಿನಿಮಾದ ಎರಡನೇ ಭಾಗದ ಟ್ರೇಲರ್​ ಬಿಡುಗಡೆಯಾಗಿದೆ.

ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೈಲರ್
ಪೊನ್ನಿಯನ್​ ಸೆಲ್ವಂ-2 ಸಿನಿಮಾ ಟ್ರೈಲರ್

By

Published : Mar 30, 2023, 8:16 AM IST

ಚೆನ್ನೈ (ತಮಿಳುನಾಡು):ಚೋಳ ಸಾಮ್ರಾಜ್ಯಕ್ಕಾಗಿ ನಡೆದ ಹೋರಾಟ, ರಕ್ತಚರಿತ್ರೆಯನ್ನು ಕಟ್ಟಿಕೊಡುವ "ಪೊನ್ನಿಯನ್​ ಸೆಲ್ವಂ" ಸಿನಿಮಾದ ಎರಡನೇ ಭಾಗದ ಟ್ರೇಲರ್​ ಬಿಡುಗಡೆ ಸಮಾರಂಭ ಗುರುವಾರ ನಡೆದಿದ್ದು ಹಲವು ವಿಶೇಷತೆಗಳಿಂದ ಕೂಡಿತ್ತು. ಒಂದೆಡೆ, ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾದರೆ, ನಾಯಕಿಯರಾದ ಐಶ್ವರ್ಯಾ ರೈ ಮತ್ತು ತ್ರಿಶಾ ರಾಣಿಯರ ಲುಕ್​ನಲ್ಲಿ ಮಿಂಚಿದರು.

ಥೇಟ್​ ರಾಣಿಯರಂತೆ ಸಿಂಗರಿಸಿಕೊಂಡಿದ್ದ ನಟಿಯರು ರೆಡ್​​ ಕಾರ್ಪೆಟ್​ ಮೇಲೆ ನಡೆದು ಬರುತ್ತಿದ್ದರೆ, ಅಭಿಮಾನಿಗಳ ಕರತಾಡನದ ಸದ್ದು ಜೋರಾಗಿತ್ತು. ಮಾಜಿ ವಿಶ್ವಸುಂದರಿ ಐಶ್ವರ್ಯಾ ಗುಲಾಬಿ ಬಣ್ಣದ ಡ್ರೆಸ್​ನಲ್ಲಿ ಕಂಗೊಳಿಸಿದರು. ಗುಲಾಬಿ ಕ್ಯಾನ್ವಾಸ್ ಅನ್ನು ಚಿನ್ನದ ಎಳೆಗಳಿಂದ ಕಸೂತಿ ಮಾಡಲಾಗಿತ್ತು. ಸಿಂಹಾಸನದ ಮೇಲೆ ಕುಳಿತು ನೀಡಿದ ಪೋಸ್​ ಗಮನ ಸೆಳೆಯಿತು. ಲೈಕಾ ಪ್ರೊಡಕ್ಷನ್ಸ್‌ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಸೊಗಸುಗಾತಿ, ಮೋಡಿಮಾಡುವ ಸೌಂದರ್ಯವತಿ ನಂದಿನಿ ಸಮಾರಂಭದ ಶ್ರೇಷ್ಠತೆ ಹೆಚ್ಚಿಸಿದರು ಎಂದು ಬರೆದುಕೊಂಡಿದೆ.

ರಾಜಕುಮಾರಿ ಕುಂದವೈ ಪಾತ್ರದಲ್ಲಿ ನಟಿಸಿರುವ ತ್ರಿಶಾ, ನೀಲಿ ಬಣ್ಣದ ಸೀರೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ಆಗಮಿಸಿದರು. ಲೈಕಾ ಪ್ರೊಡಕ್ಷನ್ಸ್‌ನ ಟ್ವಿಟರ್​ನಲ್ಲಿ ನಟಿ ಸಿಂಹಾಸನದ ಮೇಲೆ ಕುಳಿತಿರುವ ವಿಡಿಯೋವನ್ನು ಹಂಚಿಕೊಂಡಿದೆ. "ತ್ರಿಶಾಕೃಷ್ಣನ್ ಸಹ ರಾಜಮನೆತನದ ಸಾಕಾರ" ಎಂದು ಶೀರ್ಷಿಕೆ ನೀಡಿದೆ. ಇನ್ನೊಂದೆಡೆ ಕೊಡುಂಬಳೂರಿನ ರಾಜಕುಮಾರಿ ವನತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೋಭಿತಾ ಧೂಳಿಪಾಲ, ಪಿಂಕ್ ಸೀರೆಯಲ್ಲಿ ಆಕರ್ಷಕವಾಗಿ ಕಂಡುಬಂದರು.

ಟ್ರೇಲರ್​ಗೆ ಮೆಚ್ಚುಗೆ:ಪೊನ್ನಿಯನ್​ ಸೆಲ್ವಂ ಸಾವಿನ ನಂತರ ಹೊಸ ರಾಜನ ಹೆಸರು ಘೋಷಿಸಲಾಗುತ್ತದೆ. ಅಲ್ಲಿಂದ ಕಿತ್ತಾಟ ಆರಂಭವಾಗುತ್ತದೆ. ರಾಣಿ ನಂದಿನಿ(ಐಶ್ವರ್ಯಾ ರೈ) ಚೋಳರ ಸಾಮ್ರಾಜ್ಯವನ್ನು ನಾವು ನಾಶ ಮಾಡುತ್ತೇವೆ ಎಂದು ಶಪಥ ಮಾಡಿ, ಕರಿಕಾಲನ್(ವಿಕ್ರಮ್​) ಎದೆಗೆ ಖಡ್ಗ ಚುಚ್ಚುತ್ತಾಳೆ. ಈ ಮೂಲಕ ಟ್ರೇಲರ್​ ಕೊನೆಗೊಳ್ಳುತ್ತದೆ. ಮುಂದಿನ ಭಾಗದ ಕುತೂಹಲವನ್ನು ಹೆಚ್ಚಿಸುವ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಪೊನ್ನಿಯನ್​ ಸೆಲ್ವಂ ಮೊದಲ ಭಾಗ ವಿಶ್ವದಾದ್ಯಂತ 480 ಕೋಟಿ ರೂಪಾಯಿಗಳನ್ನು ಗಳಿಸಿತ್ತು.

ಸಿನಿಮಾವು ಕತೆಯೊಂದಿಗೆ ಮೇಕಿಂಗ್​​ನಿಂದಲೂ ಕೂಡ ಗಮನ ಸೆಳೆದಿತ್ತು. ಸಿನಿಮಾದ ಅದ್ಧೂರಿ ಸೆಟ್​ಗಳು, ಕ್ಯಾಮರಾ ಕೆಲಸ ಎಲ್ಲವೂ ವಿಸ್ಮಯ ಎಂಬಂತೆ ಭಾಸವಾಗಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಕೂಡ ಅಷ್ಟೇ ನಿರೀಕ್ಷೆ ಮೂಡಿಸಿದೆ. ಅದ್ದೂರಿಯಾಗಿ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್, ತ್ರಿಶಾ ಕೃಷ್ಣನ್, ಜಯಂ ರವಿ ಮತ್ತು ಸೋಭಿತಾ ಧೂಳಿಪಾಲ ಸೇರಿದಂತೆ ತಾರೆಯರ ದಂಡು ಭಾಗವಹಿಸಿತ್ತು.

ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್​ ಕಂಡು ಐಶ್ವರ್ಯಾ ರೈ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. "ನೀವು ನಮಗೆ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಿದ್ದೀರಿ. ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್​ಗಾಗಿ ನಾವು ಕಾದಿದ್ದೇವೆ" ಎಂದು ರೈ ಹೇಳಿದರು.

ಮಣಿರತ್ನಂ ಅವರ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾದಲ್ಲಿ ವಿಕ್ರಮ್ ಮತ್ತು ಕಾರ್ತಿ ನಾಯಕರಾಗಿ ನಟಿಸಿದ್ದಾರೆ. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಮಣಿರತ್ನಂ ಮತ್ತು ಸುಭಾಸ್ಕರನ್ ಅಲ್ಲಿರಾಜ ನಿರ್ಮಿಸಿರುವ ಪೊನ್ನಿಯಿನ್ ಸೆಲ್ವನ್ 2 ಏಪ್ರಿಲ್ 28 ರಂದು ಥಿಯೇಟರ್‌ಗೆ ಬರಲಿದೆ.

ಇದನ್ನೂ ಓದಿ:ಕಟೌಟ್​ ಸುಂದರಿ ಉರ್ಫಿ ಜಾವೇದ್ ಗುಣಗಾನ ಮಾಡಿದ ಬಾಲಿವುಡ್​ ಬೇಬೋ

ABOUT THE AUTHOR

...view details