ನವದೆಹಲಿ: 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನು ಅರ್ಜಿಯ ತೀರ್ಪನ್ನು ದೆಹಲಿಯ ಪಟಿಯಾಲ ಕೋರ್ಟ್ ನವೆಂಬರ್ 15ಕ್ಕೆ ಕೊಡಲಿದೆ.
ಪ್ರಕರಣ ಸಂಬಂಧ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಜಾಮೀನು ಅರ್ಜಿಯನ್ನು ಪಟಿಯಾಲ ನ್ಯಾಯಾಲಯ ನಿನ್ನೆ ವಿಚಾರಣೆ ನಡೆಸಿ, ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಆರೋಪಿ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದು, ಇನ್ನೂ ಹಲವರನ್ನು ಬಂಧಿಸಲಾಗಿದೆ. ಆದರೆ, ಜಾಕ್ವೆಲಿನ್ ಬಂಧನ ಯಾಕಾಗಿಲ್ಲ ಎಂದು ನ್ಯಾಯಾಲಯ ನಿನ್ನೆಯಷ್ಟೇ ಪ್ರಶ್ನೆ ಮಾಡಿತ್ತು. ಇದೀಗ ಅವರ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ಘೋಷಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೂ ನಟಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ನವೆಂಬರ್ 15ರಂದು ಏನಾಗಲಿದೆ ಎನ್ನುವ ಆತಂಕ ನಟಿಗೆ ಶುರುವಾಗಿದೆ.
ಸದ್ಯ ಈಗಿರುವ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಧ್ಯಂತರ ಜಾಮೀನನ್ನು ನ್ಯಾಯಾಲಯ ಮಂಗಳವಾರದವರೆಗೆ (ನವೆಂಬರ್ 15) ವಿಸ್ತರಿಸಿದೆ. ಈ ಹಿಂದೆ ಫರ್ನಾಂಡಿಸ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರ ಆದೇಶ ಸಿದ್ಧವಾಗದ ಹಿನ್ನೆಲೆ ತೀರ್ಪು ಪ್ರಕಟಣೆ ದಿನಾಂಕವನ್ನು ನವೆಂಬರ್ 15ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ:ವರ್ಕ್ಔಟ್ ಮಾಡುವಾಗಲೇ ಕುಸಿದು ಬಿದ್ದ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಸಾವು
ಹಣದ ಕೊರತೆಯಿಲ್ಲದ ಕಾರಣ ಫರ್ನಾಂಡಿಸ್ ಸುಲಭವಾಗಿ ದೇಶದಿಂದ ಪರಾರಿಯಾಗಬಹುದು ಎಂಬ ಇಡಿ ಸಲ್ಲಿಸಿದ್ದ ಮನವಿ ಅರ್ಜಿ ಅನ್ನು ನಿನ್ನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ನ್ಯಾಯಾಲಯವು ನಟಿಯನ್ನು ಏಕೆ ಬಂಧಿಸಿಲ್ಲ ಎಂದು ಇ.ಡಿಗೆ ಪ್ರಶ್ನಿಸಿತ್ತು. ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳ ಮೇಲೆ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು.
"ಎಲ್‌ಒಸಿ ನೀಡಿದ್ದರೂ ನೀವು (ಇಡಿ) ತನಿಖೆಯ ಸಮಯದಲ್ಲಿ ಜಾಕ್ವೆಲಿನ್ ಅವರನ್ನು ಏಕೆ ಬಂಧಿಸಿಲ್ಲ? ಇತರ ಆರೋಪಿಗಳು ಜೈಲಿನಲ್ಲಿದ್ದಾರೆ. ನಟಿಯ ವಿಷಯದಲ್ಲಿ ಏಕೆ ಆಯ್ಕೆ ನೀತಿಯನ್ನು ಅನುಸರಿಸಬೇಕು ಎಂದು ನ್ಯಾಯಾಲಯವು ತನಿಖಾ ಸಂಸ್ಥೆಯನ್ನು ಕೇಳಿತ್ತು.
ಇದನ್ನೂ ಓದಿ:ಜಾಕ್ವೆಲಿನ್ರನ್ನು ಏಕೆ ಬಂಧಿಸಿಲ್ಲ? ಇ.ಡಿ.ಗೆ ನ್ಯಾಯಾಲಯ ಪ್ರಶ್ನೆ
ನ್ಯಾಯಾಲಯವು ಸೆಪ್ಟೆಂಬರ್ 26 ರಂದು 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ನಟಿಗೆ ಮಧ್ಯಂತರ ಜಾಮೀನು ನೀಡಿತ್ತು. ಆಗಸ್ಟ್ 31ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಪೂರಕ ಚಾರ್ಜ್ ಶೀಟ್ ಅನ್ನು ಪರಿಗಣಿಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಫರ್ನಾಂಡಿಸ್ ಅವರಿಗೆ ಕೋರ್ಟ್ ತಿಳಿಸಿತ್ತು.
ತನಿಖೆಗೆ ಸಂಬಂಧಿಸಿದಂತೆ ಇ.ಡಿ ಇಂದ ಹಲವು ಬಾರಿ ಸಮನ್ಸ್ ಪಡೆದಿದ್ದ ಫರ್ನಾಂಡೀಸ್ ಅವರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಇಡಿಯ ಹಿಂದಿನ ಚಾರ್ಜ್ ಶೀಟ್‌ನಲ್ಲಿ ಆಕೆಯನ್ನು ಆರೋಪಿ ಎಂದು ನಮೂದಿಸಿರಲಿಲ್ಲ. ಆದಾಗ್ಯೂ, ದಾಖಲೆಗಳಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಡ್ಯಾನ್ಸರ್, ನಟಿ ನೋರಾ ಫತೇಹಿ ಹೇಳಿಕೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ.