ಬಾಲಿವುಡ್ ತಾರೆ ಅನನ್ಯ ಪಾಂಡೆ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷತ ‘ಲೈಗರ್’ ಚಿತ್ರದಲ್ಲಿ ಬಾಕ್ಸಿಂಗ್ ಲೋಕದ ದಿಗ್ಗಜ ಮೈಕ್ ಟೈಸನ್ ಕಾಣಿಸಿಕೊಳ್ಳುತ್ತಿರುವುದು ಗೊತ್ತೇ ಇದೆ. ಇದೇ ಮೊದಲ ಬಾರಿಗೆ ಅವರು ಭಾರತೀಯ ಸಿನಿಮಾದಲ್ಲಿ ನಟಿಸಿತ್ತಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇವರಂತೆ ಇದಕ್ಕೂ ಮುನ್ನ ಹಲವು ಹಾಲಿವುಡ್ ನಟರು ಭಾರತೀಯ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅವರ್ಯಾರು? ಯಾವ ಯಾವ ಸಿನಿಮಾಗಳಲ್ಲಿ ನಟಿಸಿದ್ದರು ಅನ್ನೋದನ್ನು ಇಲ್ಲಿ ನೋಡಬಹುದು.
ರೆಬೆಕಾ ಬ್ರೀಡ್ಸ್:'ಪ್ರೆಟಿ ಲಿಟಲ್ ಲೈಯರ್ಸ್', 'ದಿ ಒರಿಜಿನಲ್ಸ್', 'ಮೊಲಿ' ಮತ್ತು 'ಬ್ಲೂ ವಾಟರ್ ಹೈ' ನಂತಹ ಅನೇಕ ಜನಪ್ರಿಯ ಹಾಲಿವುಡ್ ರಿಯಾಲಿಟಿ ಶೋ ಮತ್ತು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಇವರು ಪ್ರಸಿದ್ಧಿ ಪಡೆದವರು. ಹಾಲಿವುಡ್ನಿಂದ ಬಾಲಿವುಡ್ಗೆ ಬಂದ ಇವರು ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ‘ಭಾಗ್ ಮಿಲ್ಕಾ ಭಾಗ್’ ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಂಡವರು. ಚಿತ್ರದಲ್ಲಿ ಅವರು ಫರ್ಹಾನ್ ಅಖ್ತರ್ ಜೊತೆಗೆ 'ಸ್ಲೋ ಮೋಷನ್ ಆಂಗ್ರೇಜಾ' ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಫರ್ಹಾನ್ ಅಖ್ತರ್ ಜೊತೆಗಿನ ನಟನೆ ನೋಡುಗರ ಹೃದಯಕ್ಕೆ ತೀರಾ ಹತ್ತಿರವೆನಿಸುತ್ತದೆ.
ಸಾರಾ ಥಾಂಪ್ಸನ್:ಅವರು 'ಕ್ರೂಯಲ್ ಎಂಟೆನ್ಶನ್ 2', 'ಬ್ರೋಕನ್ ವಿಂಡೋಸ್', 'ಬ್ರೂಕ್ಲಿನ್'ಸ್ ಫೈನೆಸ್ಟ್' ಮತ್ತು 'ಬೇಬಿಸಿಟ್ಟರ್ ವಾಂಟೆಡ್' ಸಿನಿಮಾದ ನಟನೆಗೆ ಪ್ರಸಿದ್ಧರಾದವರು. ಸಾರಾ ಥಾಂಪ್ಸನ್ 2010ರಲ್ಲಿ ಬಿಡುಗಡೆಯಾದ ಬಾಲಿವುಡ್ ಚಲನಚಿತ್ರ 'ರಾಜನೀತಿ'ಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಮರ್ ಪ್ರತಾಪ್ (ರಣಬೀರ್ ಕಪೂರ್) ಗೆಳತಿ ಸಾರಾ ಜೀನ್ ಕಾಲಿನ್ಸ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಕಾಶ್ ಝಾ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್, ಕತ್ರಿನಾ ಕೈಫ್, ನಾನಾ ಪಾಟೇಕರ್, ಅರ್ಜುನ್ ರಾಂಪಾಲ್ ಮತ್ತು ಮನೋಜ್ ಬಾಜ್ಪೇಯಿ ಸೇರಿದಂತೆ ದೊಡ್ಡ ತಾರಾ ಬಳಗವೇ ನಟಿಸಿದೆ.