ಕಪೂರ್ ಫ್ಯಾಮಿಲಿಗೆ ಹೊಸ ಮನೆ ನಿರ್ಮಾಣವಾಗುತ್ತಿರುವಾಗಲೇ ಬಾಲಿವುಡ್ ನಟಿ ನೀತು ಕಪೂರ್ ಅವರು ಮುಂಬೈನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಬಾಂದ್ರಾದಲ್ಲಿ ಸೊಸೆ, ಬಾಲಿವುಡ್ ನಟಿ ಆಲಿಯಾ ಭಟ್ ಮನೆ ಖರೀದಿಸಿದ ಕೆಲವೇ ವಾರಗಳಲ್ಲಿ ನೀತು ಕಪೂರ್ ಮುಂಬೈನಲ್ಲಿ ಹೊಸ ಫ್ಲಾಟ್‌ಗಾಗಿ 17.4 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ನೀತು ಅವರ ಹೊಸ ಅಪಾರ್ಟ್‌ಮೆಂಟ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ (BKC), ಸೋಫಿಟೆಲ್ ಹೋಟೆಲ್ ಎದುರು ಇದೆ ಎಂಬ ಮಾಹಿತಿ ಇದೆ.
ವರದಿಗಳ ಪ್ರಕಾರ, ನಟಿ ನೀತು ಕಪೂರ್ ಮತ್ತು ಮಾರಾಟಗಾರ ಕೇವಲ್ ಕ್ರಿಶನ್ ನೊಹ್ರಿಯಾ (Kewal Krishan Nohria) ಮೇ. 10ರಂದು ಈ ಮನೆ ಖರೀದಿಯನ್ನು ನೋಂದಾಯಿಸಿದರು. ಜುಗ್ಜುಗ್ ಜೀಯೋ ನಟಿ ನೀತು 1.04 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. 3,387 ಚದರ ಅಡಿ ಅಪಾರ್ಟ್ಮೆಂಟ್ನಲ್ಲಿ ಮೂರು ಪಾರ್ಕಿಂಗ್ ಏರಿಯಾ ಇದೆ.
ಇತ್ತೀಚೆಗೆ ನೀತು ಕಪೂರ್ ಅವರ ಸೊಸೆ, ನಟಿ ಆಲಿಯಾ ಭಟ್ (ನಟ ರಣ್ಬೀರ್ ಕಪೂರ್ ಪತ್ನಿ) ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ. 37 ಕೋಟಿ ರೂ. ಖರ್ಚು ಮಾಡಿದ್ದಾರೆ. ಈ ಫ್ಲ್ಯಾಟ್ ನಿರ್ಮಾಣ ಹಂತದಲ್ಲಿದೆ. ಏಪ್ರಿಲ್ 10 ರಂದು ಫ್ಲಾಟ್‌ನ ನೋಂದಣಿ ಕೆಲಸ ಪೂರ್ಣಗೊಂಡಿದೆ. ಇದು ಪಾಲಿ ಹಿಲ್‌ನ ಬಾಂದ್ರಾ ನೆರೆಹೊರೆಯ ಏರಿಯಲ್ ವ್ಯೂವ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‌ನ ಆರನೇ ಮಹಡಿಯಲ್ಲಿದೆ. ಅಂದೇ, ಆಲಿಯಾ ಅವರು ತಮ್ಮ ಸಹೋದರಿ ಶಾಹೀನ್ ಅವರಿಗೆ ಜುಹು ಪ್ರದೇಶದಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.