ಭಾರತದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ, ಸೌತ್ ಸೂಪರ್ ಸ್ಟಾರ್ಗಳಾದ ರಾಮ್ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅಭಿನಯದ ಮೆಗಾ ಬ್ಲಾಕ್‌ಬಸ್ಟರ್ ಚಿತ್ರ 'ಆರ್‌ಆರ್‌ಆರ್' ಒಂದರ ನಂತರ ಒಂದರಂತೆ ದಾಖಲೆ ಸೃಷ್ಟಿಸುತ್ತಿದೆ. ಈ ಸೂಪರ್ ಹಿಟ್ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೀಗ ಚಿತ್ರವು ಮನೋರಂಜನಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ 'ಆಸ್ಕರ್' ಮೇಲೆ ಕಣ್ಣಿಟ್ಟಿದೆ. ಆರ್‌ಆರ್‌ಆರ್ ಸಿನಿಮಾದ ಸೂಪರ್ ಹಿಟ್ ಹಾಡು ನಾಟು ನಾಟು 95ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ (ಆಸ್ಕರ್ ಪ್ರಶಸ್ತಿ) ಅತ್ಯುತ್ತಮ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.
ಇದೇ ಮಾರ್ಚ್ 12 ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೆ ಚಿತ್ರತಂಡ ಮಾತ್ರವಲ್ಲದೇ ಇಡೀ ದೇಶದ ಕಣ್ಣು ನೆಟ್ಟಿದೆ. ಇದಕ್ಕೂ ಮುನ್ನ ಆರ್‌ಆರ್‌ಆರ್ ಬಗ್ಗೆ ದೊಡ್ಡ ಸುದ್ದಿಯೊಂದು ಬಂದಿದೆ. ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡಿನ ಪ್ರದರ್ಶನ ಇರುತ್ತದೆ. ಈ ಹಾಡಿನ ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗಂಜ್ ಆಸ್ಕರ್ ವೇದಿಕೆಗೆ ತಮ್ಮ ಸ್ವರದ ರಂಗು ಕೊಡಲಿದ್ದಾರೆ ಎಂದು ಅಕಾಡೆಮಿ ಪ್ರಕಟಿಸಿದೆ.
ನಾಟು ನಾಟು ಸಂಗೀತದ ಸಂಯೋಜಕ ಎಂ.ಎಂ ಕೀರವಾಣಿ ಸಹ ಈ ಶುಭ ಸುದ್ದಿ ನೀಡಿದ್ದಾರೆ. ಹಾಡಿನ ತಯಾರಿಯ ಬಗ್ಗೆಯೂ ಹೇಳಿದ್ದಾರೆ. ನಾಟು ನಾಟು ಹಾಡನ್ನು ಮೂಲ ಬೀಟ್‌ನೊಂದಿಗೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಹಾಡಿನ ಇಬ್ಬರೂ ಗಾಯಕರು ಸ್ವತಃ ಹಾಡಲಿದ್ದಾರೆ. ಅದೇ ಸಮಯದಲ್ಲಿ, ನಟರಾದ ರಾಮ್ ಚರಮ್ ಮತ್ತು ಜೂನಿಯರ್ ಎನ್ಟಿಆರ್ ಸ್ವತಃ ಈ ಹಾಡಿನಲ್ಲಿ ಪ್ರದರ್ಶನ ನೀಡಿದರೆ ಅದು ಮರೆಯಲಾಗದ ಕ್ಷಣ ಆಗಲಿದೆ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಹೇಳುತ್ತಿದ್ದಾರೆ.