ಚಾಮರಾಜನಗರ: 2021ರ ಕೋವಿಡ್ 2ನೇ ಅಲೆಯಲ್ಲಿ 36 ಜನರ ಸಾವಿಗೆ ಕಾರಣವಾದ ಚಾಮರಾಜನಗರ ಆಕ್ಸಿಜನ್ ದುರಂತ ಶೀಘ್ರವೇ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಈ ಹಿಂದೆ ಬೆಳಕಿನ ನಡೆಗೆ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ಮಾಪಕ ಅಜಯ್‌ಕುಮಾರ್ ಅವರು ಈ ಚಾಮರಾಜನಗರ ಆಮ್ಲಜನಕ ದುರಂತ ಘಟನೆಯನ್ನು ಬೆಳ್ಳಿ ತೆರೆ ಮೇಲೆ ತರಲು ಪ್ರಯತ್ನಿಸಿದ್ದು, ಚಿತ್ರ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
ಸಂತ್ರಸ್ತರ ಕುಟುಂಬಗಳ ಸಂಕಟದ ಜೊತೆಗೆ ಸರ್ಕಾರ ಮತ್ತು ಅಧಿಕಾರಶಾಹಿಯ ಲೋಪದೋಷಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈಗಾಗಲೇ ಚಾಮರಾಜನಗರ ಆಸ್ಪತ್ರೆಯಲ್ಲಿ ಶೇ.70ಕ್ಕೂ ಹೆಚ್ಚು ಚಿತ್ರೀಕರಣ ನಡೆಸಿರುವ ಚಿತ್ರತಂಡ ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದೆ. ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌ನ ಒಂದು ಭಾಗವನ್ನು ಈ ಕುಟುಂಬಗಳಿಗೆ ಸಹಾಯ ಹಸ್ತವಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.
ನಿರ್ದೇಶಕ ಅಜಯ್ ಕುಮಾರ್ ಚಿತ್ರಕ್ಕೆ ಲಾಕ್‌ಡೌನ್ ಎಂಬ ಹೆಸರಿಟ್ಟಿದ್ದಾರೆ. ಆಕ್ಸಿಜನ್ ದುರಂತದ ನಂತರ ಹಲವು ಕುಟುಂಬಗಳು ಛಿದ್ರವಾಗಿವೆ. ತಮ್ಮ ಕುಟುಂಬದ ಆಧಾರ ಸ್ತಂಭಗಳನ್ನು ಕಳೆದುಕೊಂಡಿವೆ. ಹಾಗಾಗಿ ಚಿತ್ರದ ಲಾಭದ ಶೇ.30ರಷ್ಟನ್ನು 36 ಕುಟುಂಬಗಳಿಗೆ ಸಹಾಯ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.