ಮೆಲ್ಬೋರ್ನ್: ವಿಶ್ವ ಸುಂದರಿ ಫೈನಲಿಸ್ಟ್ (ಆಸ್ಟ್ರೇಲಿಯಾ) ಸಿಯೆನ್ನಾ ವೀರ್ (Sienna Weir) ಬಗ್ಗೆ ಹೃದಯ ವಿದ್ರಾವಕ ಸುದ್ದಿ ಬೆಳಕಿಗೆ ಬಂದಿದೆ. ರೂಪದರ್ಶಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರು, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
ಕಿರಿ ವಯಸ್ಸಿನಲ್ಲೇ ಕೊನೆಯುಸಿರು:ಸಿಯೆನ್ನಾ ವೀರ್ ಅವರು ಕುದುರೆ ಸವಾರಿ ಮಾಡುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಸಿಯೆನ್ನಾ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಕಿರಿ ವಯಸ್ಸಿನಲ್ಲೇ ರೂಪದರ್ಶಿ ಕೊನೆಯುಸಿರೆಳೆದಿರುವ ಬಗ್ಗೆ ಆಪ್ತ ಮೂಲಗಳು ಮಾಹಿತಿ ಹಂಚಿಕೊಂಡಿದೆ.
ಕುದುರೆ ಸವಾರಿ ವೇಳೆ ಗಾಯಗೊಂಡಿದ್ದ ರೂಪದರ್ಶಿ: ವರದಿಯ ಪ್ರಕಾರ, ಕುದುರೆ ಸವಾರಿಯ ಸಮಯದಲ್ಲಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಸಿಯೆನ್ನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಏಪ್ರಿಲ್ 2ರಂದು ಸಿಡ್ನಿಯ ವಿಂಡ್ಸರ್ ಪೋಲ್ ಗ್ರೌಂಡ್ನಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ಆ ವೇಳೆ ಕೆಳಗೆ ಬಿದ್ದಿದ್ದಾರೆ. ಈ ಅಪಘಾತದ ನಂತರ ತಕ್ಷಣವೇ ಅವರನ್ನು ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರಿಗೆ ವಾರಗಳವರೆಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ರಾತ್ರಿ ನಿಧನರಾದರು.
ಕುದುರೆ ಸವಾರಿ ಬಗ್ಗೆ ವಿಶೇಷ ಆಸಕ್ತಿ: ಸಿಯೆನ್ನಾ ವೀರ್ ಸಿಡ್ನಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಸೈಕಾಲಜಿಯಲ್ಲಿ ಪದವಿ ಪಡೆದಿದ್ದಾರೆ. ಸಂದರ್ಶನವೊಂದರಲ್ಲಿ, ಹಾರ್ಸ್ ರೈಡಿಂಗ್ ಅಥವಾ ಕುದುರೆ ಸವಾರಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದರು.
ಹಾರ್ಸ್ ರೈಡಿಂಗ್ ಇಲ್ಲದೇ ನನ್ನ ಜೀವನವಿಲ್ಲ:ನನಗೆ ಈ ಕ್ರೀಡೆಯ ಬಗ್ಗೆ ಇಷ್ಟೊಂದು ಉತ್ಸಾಹ ಎಲ್ಲಿಂದ ಬಂತು ಎಂಬ ವಿಚಾರ ನನ್ನ ಮನೆಯವರಿಗೂ ತಿಳಿದಿರಲಿಲ್ಲ. ಆದರೆ ನಾನು 3 ವರ್ಷದವಳಾಗಿದ್ದಾಗಿನಿಂದ ಕುದುರೆ ಸವಾರಿಯಲ್ಲಿ ಒಲವು ಹೊಂದಿದ್ದೆ. ಹಾರ್ಸ್ ರೈಡಿಂಗ್ ಇಲ್ಲದೇ ನನ್ನ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಅವರು ಹೇಳಿಕೊಂಡಿದ್ದರು.