'ಕೊರಗಜ್ಜ' ಚಿತ್ರೀಕರಣದ ವೇಳೆ ಕಿಡಿಗೇಡಿಗಳಿಂದ ತೊಂದರೆ; ಶೂಟಿಂಗ್ ನಿಲ್ಲಿಸಿದ ತಂಡ ಚಿಕ್ಕಮಗಳೂರು:ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಚಿತ್ರದ ಶೂಟಿಂಗ್ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಶಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮೈದಾಡಿ ಗ್ರಾಮದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಟಿ ಶುಭಾ ಪೂಂಜಾ ಜೊತೆ ಕೆಲ ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಡಚಣೆಯಿಂದಾಗಿ ಚಿತ್ರೀಕರಣ ಕೂಡ ನಿಂತಿದೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಸುಧೀರ್ ಅತ್ತಾವರ್, "ನಮ್ಮ 'ಕೊರಗಜ್ಜ' ಸಿನಿಮಾದ ಹಾಡೊಂದನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಪರಿಸರಕ್ಕೆ ಸಂಬಂಧಿಸಿದ ಡ್ಯಾನ್ಸ್ ಆಗಿದ್ದರಿಂದ ಕರ್ನಾಟಕ ಮತ್ತು ಕೇರಳದ ಜಾನಪದ ಕಲಾವಿದರು ಇದ್ದರು. ಈ ವೇಳೆ ಕೆಲ ಜನರು ನಮ್ಮ ಶೂಟಿಂಗ್ಗೆ ತೊಂದರೆ ಕೊಡಲೆಂದು ಬಂದು ಕಿರಿಕ್ ಮಾಡಿದ್ದಾರೆ. ಈ ರೀತಿಯಾಗಿ ಇದು ಎರಡನೇ ಬಾರಿಗೆ ಆಗುತ್ತಿರುವುದು" ಎಂದು ತಿಳಿಸಿದರು.
"ಶೂಟಿಂಗ್ ಸ್ಥಳಕ್ಕೆ 5-6 ಜನ ಮಚ್ಚು ಹಿಡಿದುಕೊಂಡು ಬಂದರು. ಆ ವೇಳೆ ನಾನು ಅವರ ಮುಖದಲ್ಲಿ ರೋಷವನ್ನು ನೋಡಿದೆ. ಅದಾಗಿ ಮತ್ತೊಂದು ಗುಂಪು ಬಂತು. ಐದಾರು ಗಾಡಿಗಳಲ್ಲಿ ಬಂದಿದ್ರು. ಮೂರನೆಯ ಗ್ಯಾಂಗಲ್ಲಿ ಬಂದವರು ಹೇಳಿದ್ರು, ನಾನು ಸಾಗರದ ಬಿಜೆಪಿ ಘಟಕಾಧ್ಯಕ್ಷ ಅಂತ. ಒಂದು ಪಕ್ಷ ಈ ರೀತಿಯಾಗಿ ಮಾಡಬಹುದು ಎಂದು ಅನಿಸುತ್ತಿಲ್ಲ. ನಾನು ಪೊಲೀಸರಿಗೆ ದೂರು ಕೊಟ್ಟಿಲ್ಲ. ಗಣೇಶ ಆಚಾರ್ಯರಂತಹ ಖ್ಯಾತ ಕೊರಿಯೋಗ್ರಾಫರ್ ಬಂದಿದ್ದ ವೇಳೆ ಹೀಗಾಯಿತಲ್ಲ ಎಂದು ಬಹಳ ನೋವಾಯಿತು" ಎಂದು ಹೇಳಿದರು.
ಇದನ್ನೂ ಓದಿ:ಕೊರಗಜ್ಜ ಚಿತ್ರಕ್ಕೆ ಸ್ವತಃ ಕನ್ನಡದಲ್ಲಿಯೇ ಡಬ್ಬಿಂಗ್ ಮಾಡಿದ ಹಾಲಿವುಡ್ ಮತ್ತು ಬಾಲಿವುಡ್ ನಟ
ದೈವ ನರ್ತಕ ರವಿ ಹೇಳಿದ್ದೇನು?: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ದೈವ ನರ್ತಕ ರವಿ, 'ಕೊರಗಜ್ಜ' ಚಿತ್ರೀಕರಣದ ವೇಳೆ ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ ಎಂದು ಹೇಳಿದ್ದಾರೆ. "ನಿನ್ನೆ ಮೈದಾಡಿ ಗ್ರಾಮದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ಕೊರಗಜ್ಜನ ವೇಷ ಧರಿಸಿ ಚಿತ್ರೀಕರಣ ಮಾಡಲಾಗುತ್ತಿದೆ ಎಂಬ ಮಾಹಿತಿ ನಮಗೆ ಬಂತು. ಹಾಗಾಗಿ ನಾವು ಅಲ್ಲಿಗೆ ತೆರಳಿ ವಿಚಾರಣೆ ಮಾಡಿದೆವು. ಕೊರಗಜ್ಜನ ನರ್ತನ ಮಾಡೋದಾದ್ರೆ ಈ ಸ್ಥಳದಲ್ಲಿ ನೀವು ಮಾಡಬಾರದು ಎಂಬ ಮಾಹಿತಿಯನ್ನು ಅವರಿಗೆ ಕೊಟ್ಟಿದ್ದೆವು. ಅದನ್ನು ಹೊರತುಪಡಿಸಿ, ನಮ್ಮಿಂದ ಒಂದು ಕೆಟ್ಟ ಪದವಾಗಲಿ, ಒಂದು ಮಾತಾಗಲಿ ಬಂದಿಲ್ಲ" ಎಂದರು.
"ನಾವು 8 ರಿಂದ 10 ಮಂದಿ ಹೋಗಿದ್ದೆವು. ಅವರೊಂದಿಗೆ ಸಮಾಧಾನದಲ್ಲೇ, ದೈವಕ್ಕೆ ಸಂಬಂಧಿಸಿದ ಶೂಟಿಂಗ್ಗಳನ್ನು ನೀವು ಯಾವುದೇ ಕಾರಣಕ್ಕೂ ಇಲ್ಲಿ ಮಾಡಬೇಡಿ ಎಂದು ಹೇಳಿದ್ದೆವು. ಅಲ್ಲದೇ ಈ ಸ್ಥಳದಲ್ಲಿ ಶೂಟಿಂಗ್ ಮಾಡಲು ಯಾರ ಅನುಮತಿಯೂ ಪಡೆದಿಲ್ಲ ಎಂದು ಅವರೇ ತಿಳಿಸಿದ್ದರು. ಇನ್ನೂ ಶುಭಾ ಪೂಂಜಾ ಅವರ ಮೇಲೆ ಯಾವುದೇ ಅಸಭ್ಯ ವರ್ತನೆ ನಡೆದಿಲ್ಲ. ಮೊದಲಾಗಿ ನಾವು ಅವರನ್ನು ಇಲ್ಲಿ ನೋಡಿಯೇ ಇಲ್ಲ. ಅವರೊಂದಿಗೆ ಮಾತನಾಡುವುದು ಬಿಡಿ, ಅವರು ನಮ್ಮ ಕಣ್ಣಿಗೆ ಬಿದ್ದಿಲ್ಲ. ನಮ್ಮಿಂದ ಯಾವುದೇ ಕಿಡಿಗೇಡಿ ಕೃತ್ಯಗಳು ನಡೆದಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:'ಕೊರಗಜ್ಜ' ಸಿನಿಮಾಗೆ ಹಾಲಿವುಡ್ ತಂತ್ರಜ್ಞರಿಂದ ಗ್ರಾಫಿಕ್ಸ್ ಟಚ್; 3 ಬಾರಿ ಕ್ಲೈಮ್ಯಾಕ್ಸ್ ರೀ ಶೂಟ್