ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 'ಮಾಯಾನಗರಿ'. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿರುವ ಈ ಸಿನಿಮಾದ 'ಲಚ್ಚಿ ಲಚ್ಚಿ' ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸೋಷಿಯಲ್ ಮೀಡಿಯಾ ಸ್ಟಾರ್, ರೀಲ್ಸ್ ಮೂಲಕ ಗಮನ ಸೆಳೆಯುವ ಲಕ್ಷಾಂತರ ಫಾಲೋವರ್ಸ್ ಸಂಪಾದಿಸಿರುವ 5 ವರ್ಷದ ಮಗು ನಿಶಿತಾ ಕೈಲಿ ಈ ಹಾಡನ್ನು ಬಿಡುಗಡೆಗೊಳಿಸಲಾಯಿತು.
ಅನೀಶ್ ತೇಜೇಶ್ವರ್, ತೇಜು ಹಾಗೂ ಶ್ರಾವ್ಯ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಶಂಕರ್ ಆರಾಧ್ಯ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನು ಇಟ್ಟುಕೊಂಡು ಶಂಕರ್ ಆರಾಧ್ಯ ಈ ಚಿತ್ರವನ್ನು ನಿರೂಪಿಸಿದ್ದಾರೆ. 'ಮಾಯಾನಗರಿ' ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಹಾಡು ವೈರಲ್ ಆಗುತ್ತಿದೆ.
ಈ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ್ ಆರಾಧ್ಯ, "ಈ ಹಾಡು ನಮ್ಮ ಚಿತ್ರಕ್ಕೆ ಟ್ರಂಪ್ ಕಾರ್ಡ್ ಆಗುತ್ತೆ ಎಂದೇ ಕಲರ್ಫುಲ್ ಆಗಿಯೇ ಶೂಟ್ ಮಾಡಿದ್ದೇವೆ. ಕಂಠೀರವ ಸ್ಟುಡಿಯೋ ಮತ್ತು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ 6 ದಿನ ಹಾಡನ್ನು ಚಿತ್ರೀಕರಣ ಮಾಡಿದ್ದೇವೆ. ಹಾರರ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆ ಇದಾಗಿದೆ. ಚಿತ್ರದಲ್ಲಿ ನಾಯಕ, ಶಂಕರ್ ನಾಗ್ ಅವರ ಅಭಿಮಾನಿಯಾಗಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಲು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ ಮಾಯಾನಗರಿ ಎಂಬ ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ಆತನ ಪಾತ್ರವೇ ಮುಖ್ಯವಾಗುವ ಸಂದರ್ಭ ಬರುತ್ತದೆ. ಹೀಗೆ ಕುತೂಹಲಕಾರಿಯಾಗಿ ಸಾಗುವ ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಭದ್ರಾವತಿ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ವಿಶೇಷವಾಗಿ ಹಿರಿಯ ನಟ ದ್ವಾರಕೀಶ್ ಅವರು ರಿಯಲ್ ಲೈಫ್ ಪಾತ್ರವನ್ನೇ ಮಾಡಿದ್ದಾರೆ" ಎಂದು ತಿಳಿಸಿದರು.