ಜನಪ್ರಿಯ ನಟ ಪೂಜಾಪುರ ರವಿ (Poojapura Ravi) ನಿಧನರಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಯೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮರಯೂರಿನಲ್ಲಿರುವ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದ ಇವರು ಭಾನುವಾರ ಬೆಳಗ್ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಳೆ.
800 ಚಲನಚಿತ್ರಗಳು, 4,000 ನಾಟಕ: ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸುಮಾರು 800 ಚಲನಚಿತ್ರಗಳು ಮತ್ತು ಸುಮಾರು 4,000 ನಾಟಕಗಳಲ್ಲಿ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದರು. ಇಂದು ಇಹಲೋಕ ತ್ಯಜಿಸಿದ್ದು, ರಂಗಭೂಮಿ, ಚಿತ್ರರಂಗ, ಅಭಿಮಾನಿ ಬಳಗದವರು ಕಣ್ಣೀರಿಟ್ಟಿದ್ದಾರೆ.
1975ರಲ್ಲಿ ಚಿತ್ರರಂಗಕ್ಕೆ ಪ್ರವೇಶ: ಪೂಜಾಪುರ ರವಿ ಅವರು ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಹುಬೇಡಿಕೆ ನಟನಾಗಿ ಮಿಂಚಿದ್ದರು. ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯ ಸಾಬೀತು ಪಡಿಸಿದ್ದರು. ನಾಟಕಗಳ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ಬಳಿಕ ಬೆಳ್ಳಿತೆರೆಯಲ್ಲಿ ಛಾಪು ಮೂಡಿಸಿದ್ದರು. ಅವರು ಪ್ರಸಿದ್ಧ ನಾಟಕ ತಂಡ 'ಕಲಾನಿಲಯಂ' ಭಾಗವಾಗಿ ಕೆಲಸ ಮಾಡಿದರು. 1975ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದರು.
ಅಭಿಮಾನಿಗಳ ಸಂಪಾದನೆ:ಆರಂಭಿಕ ಹಂತದಲ್ಲಿ ಅವರಿಗೆ ಸಿಗುತ್ತಿದ್ದದ್ದು ಸಣ್ಣಪುಟ್ಟ ಪಾತ್ರಗಳೇ. ಆದರೆ ನಿಧಾನವಾಗಿ ಮಲಯಾಳಂ ಚಿತ್ರರಂಗದ ಗಣ್ಯರ ಪಟ್ಟಿಗೆ ಸೇರ್ಪಡೆಯಾದರು. ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ವೇಳೆ 800ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರವನ್ನು ಸಲೀಸಾಗಿ ನಿರ್ವಹಿಸಬಲ್ಲ ಅವರ ಸಾಮರ್ಥ್ಯವೇ ಅವರನ್ನು ಎಲ್ಲರಿಗೂ ಇಷ್ಟವಾಗುವಂತೆ ಮಾಡಿತು. ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿತು.