ಸಂಕ್ರಾಂತಿಯಂದು ಬಿಡುಗಡೆಯಾದ 'ವರಸುಡು' ಮೂಲಕ ನಟ ವಿಜಯ್ ದಳಪತಿ ಈ ವರ್ಷದಲ್ಲಿ ಮೊದಲ ಹಿಟ್ ಪಡೆದಿದ್ದಾರೆ. ಈ ಮೂಲಕ ಅವರಿಗೆ ತೆಲುಗಿನ ಚೊಚ್ಚಲ ಚಿತ್ರದಲ್ಲೇ ಯಶಸ್ಸು ದಕ್ಕಿದೆ. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ 'ಲಿಯೋ'ದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಕಾಶ್ಮೀರದಲ್ಲಿ ಶೂಟಿಂಗ್ ಶೆಡ್ಯೂಲ್ ಮುಗಿಸಿದೆ.
56 ದಿನಗಳ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದ್ದು, ಚಿತ್ರತಂಡ ಹಾಗು ಸಿಬ್ಬಂದಿ ಚೆನ್ನೈ ತಲುಪಿದ್ದಾರೆ. ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದ ಭಾಗದಲ್ಲಿ ಶ್ರಮಿಸಿದ ಸಿಬ್ಬಂದಿಗೆ ಧನ್ಯವಾದ ಅರ್ಪಿಸುವ ವಿಡಿಯೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.
‘ಲಿಯೋ’ ಕಾಶ್ಮೀರದ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ. ಪ್ರಮುಖ ಕಲಾವಿದರು ಮತ್ತು ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶೂಟಿಂಗ್ ಕಾಶ್ಮೀರದಲ್ಲಿದ್ದುದರಿಂದ ನಾವು ಮೈನಸ್ 10 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಬೇಕಾಯಿತು. ಚಳಿಯಿಂದ ನಡುಗುತ್ತಲೇ ಕೆಲಸ ಮುಂದುವರಿಸಿದ್ದೆವು. ಅಡೆತಡೆಗಳಿಲ್ಲದೆ ಕೆಲಸ ಮುಂದುವರೆಯಿತು. ರಾತ್ರಿ ಹೊತ್ತು ಚಳಿ, ಹಿಮ ಮತ್ತು ಮಳೆ ಇದ್ದಾಗ್ಯೂ ಚಿತ್ರೀಕರಣವನ್ನು ತಡೆರಹಿತವಾಗಿ ನಡೆಸಲಾಯಿತು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ರಾತ್ರಿ -2 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಿದ್ದೇವೆ. ಚಳಿ, ಹಿಮಕ್ಕೆ ಸಿಬ್ಬಂದಿಯ ಕೈಗಳು ಬಿಗಿಯಾಗಿದ್ದವು. ಆದರೆ ಎಲ್ಲರೂ ಚೆನ್ನಾಗಿ ಮತ್ತು ಬಹಳ ವೇಗವಾಗಿ ಕೆಲಸ ಮಾಡಿ ಚಿತ್ರೀಕರಣಕ್ಕೆ ಸಹಾಯ ಮಾಡಿದರು. ಲೋಕೇಶ್ ಕನಕರಾಜ್ ಕೂಡ ಸಮಯ ವ್ಯರ್ಥ ಮಾಡದೆ ಚಿತ್ರೀಕರಣ ಕಾರ್ಯ ಮುಗಿಸಿದರು ಎಂದು ನಿರ್ಮಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಎಷ್ಟೇ ಕಷ್ಟಗಳಿದ್ದರೂ ನೆಮ್ಮದಿಯಾಗಿದ್ದೇವೆ ಎಂದು ಸಿಬ್ಬಂದಿ ಮತ್ತು ಕಲಾವಿದ ತಂಡ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಸೆವೆನ್ ಸ್ಕಿನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಎಸ್.ಎಸ್.ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ 200 ಕೋಟಿ ರೂ ಬಜೆಟ್ನಲ್ಲಿ 'ಲಿಯೋ' ನಿರ್ಮಿಸುತ್ತಿದ್ದಾರೆ. ಖೈದಿ ಮತ್ತು ವಿಕ್ರಮ್ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಲೋಕೇಶ್ ಕನಕರಾಜ್ ಈಗಾಗಲೇ ವಿಜಯ್ ಜೊತೆ ಮಾಸ್ಟರ್ ಸಿನಿಮಾ ಮಾಡಿ ಹಿಟ್ ಆಗಿತ್ತು. ಲಿಯೋ ಮೇಲೂ ಭಾರಿ ನಿರೀಕ್ಷೆಗಳಿವೆ. ಈಗಾಗಲೇ 400 ಕೋಟಿ ರೂಗೂ ಅಧಿಕ ಪ್ರೀ ರಿಲೀಸ್ ಬಿಸ್ನೆಸ್ ನಡೆದಿದೆ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ ತ್ರಿಷಾ ನಟಿಸುತ್ತಿದ್ದಾರೆ. ಇನ್ನುಳಿದಂತೆ ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್ ಮತ್ತು ಮನೋಬಾಲಾ ಅವರಿಂದ ಕೂಡಿದ ದೊಡ್ಡ ತಾರಾಗಣವಿದೆ. ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಸಮಂತಾ ಅಭಿನಯದ 'ಖುಷಿ' ಬಿಡುಗಡೆಗೆ ಮುಹೂರ್ತ ಫಿಕ್ಸ್