ದಕ್ಷಿಣ ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಲಿಯೋ' ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಕೋಟ್ಯಂತರ ಅಭಿಮಾನಿಗಳ ಕಾಯುವಿಕೆ ಪೂರ್ಣಗೊಂಡಿದೆ. 2021ರ 'ಮಾಸ್ಟರ್' ಸಿನಿಮಾ ನಂತರ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ನಟ ವಿಜಯ್ ಕಾಂಬಿನೇಷನ್ನಲ್ಲಿ ಮೂಡಿ ಬಂದ ಸಿನಿಮಾ ಇದಾಗಿದೆ. 'ವಿಕ್ರಮ್'ನಂತಹ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಬಂದಿರುವ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ಆದ ಹಿನ್ನೆಲೆ, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳಿದ್ದವು. ಅಭಿಮಾನಿಗಳು, ಸಿನಿಪ್ರಿಯರು ಥಿಯೇಟರ್ನತ್ತ ಮುಗಿಬಿದ್ದಿದ್ದಾರೆ. ಆದರೆ, ಆರಂಭಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಟ್ವಿಟರ್ ವಿಮರ್ಶೆ: ಮೊದಲ ಶೋ ವೀಕ್ಷಿಸಿರುವ ಪ್ರೇಕ್ಷಕರು ಟ್ವಿಟರ್ನಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಆರಂಭಿಕ ವಿಮರ್ಶೆಗಳ ಪ್ರಕಾರ, ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗೋದು ಪಕ್ಕಾ. ಪ್ರತೀ ಪಾತ್ರವನ್ನೂ ಅದ್ಭುತವಾಗಿ ತೋರಿಸಲಾಗಿದೆ. ಮಧ್ಯಂತರಕ್ಕೂ 10 ನಿಮಿಷಗಳ ಮೊದಲ ದೃಶ್ಯಗಳು ರೋಮಾಂಚಕಾರಿಯಾಗಿವೆ. ದ್ವಿತೀಯಾರ್ಧವೂ ಉತ್ತಮವಾಗಿದೆ. ಲಿಯೋ ದಾಸ್ ಆಗಿ ದಳಪತಿ ವಿಜಯ್ ಅವರ ಸ್ಕ್ರೀನ್ ಪ್ರಸೆನ್ಸ್ ಚೆನ್ನಾಗಿದೆ. ಲೋಕೇಶ್ ಕನಕರಾಜ್ ಅವರ ನಿರ್ದೇಶನ ಶೈಲಿ, ಕಥೆ, ಟ್ವಿಸ್ಟ್ಗಳು ಎಲ್ಲವೂ ಉತ್ತಮ. ಸಂಜಯ್ ದತ್ ಅವರದ್ದು ಮನಸೆಳೆಯುವ ನಟನೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರದ ಹೈಲೈಟ್ ಎಂದೆಲ್ಲಾ ಸಿನಿಮಾ ನೋಡಿದವರ ಪೈಕಿ ಹಲವರು ತಿಳಿಸಿದ್ದಾರೆ.
ಮಿಶ್ರ ಪ್ರತಿಕ್ರಿಯೆ: ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಕೆಲ ನೆಗೆಟಿವ್ ರಿವ್ಯೂ ಕೂಡ ಬಂದಿವೆ. ಲೋಕೇಶ್ ಕನಕರಾಜ್ ಅವರ ಹಿಂದಿನ ಚಿತ್ರ 'ವಿಕ್ರಂ'ಗೆ ಹೋಲಿಸಿದರೆ ಲಿಯೋ ಕೊಂಚ ಹಿಂದಿದೆ ಎಂದು ಕೂಡ ಹೇಳಲಾಗಿದೆ. ಸಿನಿಮಾದಲ್ಲಿ ಹೆಚ್ಚೇನು ಹೊಸತಿಲ್ಲ, ಮಾಮೂಲಾಗಿದೆ ಎಂಬುದು ಹಲವರ ಅಭಿಪ್ರಾಯ. ಆದರೆ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೋ ಅಥವಾ ಮಾಮೂಲಿ ಸಿನಿಮಾವೇ ಎಂದು ನಿರ್ಧರಿಸಲು ನಾಳೆ ಬೆಳಗ್ಗೆವರೆಗೂ ಕಾಯಬೇಕಿದೆ. ಬಾಕ್ಸ್ ಆಫೀಸ್ ಅಂಕಿ ಅಂಶ ಚಿತ್ರದ ಯಶಸ್ಸನ್ನು ನಿರ್ಧರಿಸಲಿದೆ.