'ಅಭಿನಯ ಚಕ್ರವರ್ತಿ' ಸುದೀಪ್ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ 'ವಿಕ್ರಾಂತ್ ರೋಣ'. ಇದು ಸೂಪರ್ ಹಿಟ್ ಆಗಿತ್ತು. ಬಳಿಕ ಯಾವುದೇ ಹೊಸ ಚಿತ್ರವನ್ನು ಅವರು ಘೋಷಿಸಿಲ್ಲ. ಹೀಗಾಗಿ ಕಿಚ್ಚನ 46ನೇ ಸಿನಿಮಾ ಬಗ್ಗೆ ಹಲವು ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಪರಭಾಷೆ ನಿರ್ದೇಶಕರು ಇವರ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.
ನಟ ಸುದೀಪ್ ಟ್ವೀಟ್:ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ವೀಟ್, ಮೀಮ್ಸ್ಗಳನ್ನು ಅರ್ಥ ಮಾಡಿಕೊಂಡೆ. 'ಕಿಚ್ಚ 46' ಎಂಬುದು ನನಗೆ ವಿಶೇಷ ಎನಿಸಿತು. ಎಲ್ಲದಕ್ಕೂ ಧನ್ಯವಾದಗಳು. ಆದ್ರೆ ಸಣ್ಣ ಸ್ಪಷ್ಟೀಕರಣ ಕೊಡಲು ನಿರ್ಧರಿಸಿದ್ದೇನೆಂದು ಟ್ವೀಟ್ ಆರಂಭಿಸಿದ್ದಾರೆ.
ನಾನು ವಿರಾಮ ತೆಗೆದುಕೊಂಡಿದ್ದೇನೆ. ಇದು ನನ್ನ ಮೊದಲ ಬ್ರೇಕ್. ವಿಕ್ರಾಂತ್ ರೋಣ ಬಳಿಕ ಈ ಬ್ರೇಕ್ ಬೇಕಿತ್ತು. ಕೋವಿಡ್ ಸಮಯ, ಬಿಗ್ಬಾಸ್ ಒಟಿಟಿ ಬ್ಯುಸಿ ಶೆಡ್ಯೂಲ್ ಬಳಿಕ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ನನಗೆ ಖುಷಿ ಕೊಡುವ ಕೆಲಸ ಮಾಡುವ ಮೂಲಕ ಎಂಜಾಯ್ ಮಾಡುತ್ತೇನೆ. ಕ್ರಿಕೆಟ್ ನನಗೆ ಖುಷಿ ಕೊಡುವ ಮತ್ತು ರಿಲ್ಯಾಕ್ಸ್ ಮಾಡಲು ಉತ್ತಮ ಕ್ರೀಡೆಯಾಗಿದೆ. ಕೆಸಿಸಿ ಅಲ್ಲಿ ಖುಷಿ ಕ್ಷಣಗಳನ್ನು ಕಳೆದಿದ್ದೇನೆ. ಇದೊಂದು ಉತ್ತಮ ವಿರಾಮವಾಗಿತ್ತು.
ಅದಾಗ್ಯೂ, ನನ್ನ ಚಿತ್ರಕಥೆ ಚರ್ಚೆ ಮತ್ತು ಮೀಟಿಂಗ್ಸ್ ನನ್ನ ಜೀವನದ ಒಂದು ಅವಿಭಾಜ್ಯ ಅಂಗ. ಮೂರು ಕಥೆಗಳು ಫೈನಲ್ ಆಗಿವೆ, ಅಂದರೆ ಮೂರು ಸಿನಿಮಾಗಳು ಅಂತಿಮವಾಗಿವೆ. ಪೂರ್ವ ತಯಾರಿಗಳು ಮುಂದುವರಿದಿದೆ. ಈ ಮೂರು ಕಥೆಗಳಿಗೆ ದೊಡ್ಡ ಮಟ್ಟದಲ್ಲಿ ಹೋಮ್ ವರ್ಕ್ ಆಗಬೇಕು. ತಂಡಗಳು ಹಗಲು ರಾತ್ರಿ ಕೆಲಸದಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಮುಂದಿನ ಚಿತ್ರದ ಬಗ್ಗೆ ಘೋಷಣೆ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.