ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್, ಫರ್ಹಾನ್ ಬಿನ್ ಲಿಯಾಕತ್ ಎಂಬ ಯುವಕನ ಜೊತೆ ಫೋಟೋ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿತ್ತು. ಕೀರ್ತಿ ಸುರೇಶ್ ಅವರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡಿದ್ದವು. ಆದರೆ ಇದ್ಯಾವುದಕ್ಕೂ ಇದುವರೆಗೆ ನಟಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆದರೆ ಇದೀಗ ನಟಿ ಕೀರ್ತಿ ಸುರೇಶ್ ಅವರ ತಂದೆ ಖ್ಯಾತ ಚಲನಚಿತ್ರ ನಿರ್ಮಾಪಕ ಜಿ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಮಗಳು, ನಟಿ ಕೀರ್ತಿ ಸುರೇಶ್, ಫರ್ಹಾನ್ ಬಿನ್ ಲಿಯಾಕತ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ, ವರದಿಗಳು ಸುಳ್ಳು ಎಂದು ಹೇಳಿದ್ದಾರೆ. ನಿರ್ಮಾಪಕ ಸುರೇಶ್ ಕುಮಾರ್ ಅವರು ಕೇರಳ ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಅವರ ಫೇಸ್ ಬುಕ್ ಪೇಜ್ ಮೂಲಕ ಈ ಹೇಳಿಕೆಯನ್ನು ನೀಡಿದ್ದಾರೆ.
ಮಲಯಾಳಂ ಚಲನಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ತಮ್ಮ ಹೇಳಿಕೆಯಲ್ಲಿ "ನನ್ನ ಮಗಳು ಕೀರ್ತಿ ಸುರೇಶ್ ಒಬ್ಬ ಯುವಕನೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಮತ್ತು ಅವಳು ಆತನ್ನು ಮದುವೆಯಾಗುತ್ತಿದ್ದಾಳೆ ಎನ್ನುವ ಆನ್ಲೈನ್ ಮಾಧ್ಯಮಗಳಲ್ಲಿ ಬಂದ ವರದಿಗಳು ಇವೆಲ್ಲವೂ ಸುಳ್ಳು ಸುದ್ದಿ." ಎಂದು ಹೇಳಿದ್ದಾರೆ.
"ಸದ್ಯ ವೈರಲ್ ಆಗುತ್ತಿರುವ ಹುಡುಗ ಬಗ್ಗೆ ನನಗೆ ತಿಳಿದಿದೆ. ಅವನು ಹತ್ತಿರದ ಕುಟುಂಬ ಸ್ನೇಹಿತ. ಫರ್ಹಾನ್ ಹುಟ್ಟುಹಬ್ಬದಂದು, ಕೀರ್ತಿ ಕೆಲವು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನಷ್ಟೇ ಕೋರಿದ್ದಳು. ಅದನ್ನು ತಮಿಳು ಆನ್ಲೈನ್ ನಿಯತಕಾಲಿಕೆ ತೆಗೆದುಕೊಂಡಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಇದರ ಬಗ್ಗೆ ವಿಚಾರಿಸಲು ಅನೇಕರು ಕರೆ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ" ಎಂದು ಹೇಳಿದ್ದಾರೆ.