ನಟ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಕನ್ನಡಿಗರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಪಾಪ್ಯುಲರ್ ರಿಯಾಲಿಟಿ ಶೋ ದಿನಕ್ಕೊಂದು ಟಾಸ್ಕ್, ಟ್ವಿಸ್ಟ್ ಎಂದು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹೀಗೆ ನಾನಾ ವಿಷಯಗಳಿಂದ ಗಮನ ಸೆಳೆಯುತ್ತಿರುವ 'ಕನ್ನಡ ಬಿಗ್ ಬಾಸ್ ಸೀಸನ್ 10' ಈಗಾಗಲೇ 50 ದಿನಗಳನ್ನು ಪೂರೈಸಿದೆ. ಯಶಸ್ವಿ 50 ದಿನಗಳನ್ನು ದಾಟಿರುವ ಬಿಗ್ ಬಾಸ್ ಮನೆಗೆ ಈ ವಾರ ಮಾಡೆಲಿಂಗ್ನಲ್ಲಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಬಿಗ್ ಬಾಸ್ ಮನೆಗೆ ಪವಿ ಮತ್ತು ಅವಿನಾಶ್ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಾಗಿನಿಂದ ಹೊಸ ಗಾಳಿ ಬೀಸುತ್ತಿದೆ. ಹೊಸ ಸ್ಪರ್ಧಿಗಳ ಜೊತೆಗಿನ ಒಡನಾಟ, ಮನೆಯೊಳಗಿನ ಗುಂಪುಗಳ ಸಮತೋಲನವನ್ನು ತಪ್ಪಿಸುತ್ತಿದೆ. ಟಾಸ್ಕ್‌ಗಳ ದಿಕ್ಕು ದೆಸೆಗಳನ್ನು ಬದಲಿಸುತ್ತಿದೆ. ಅಷ್ಟೇ ಅಲ್ಲ, ಟಫ್ ಟಾಸ್ಕ್‌ಗಳಲ್ಲಿ ದಣಿದಿದ್ದ ಮನೆಯವರಿಗೆ ಮಜವಾದ ಟಾಸ್ಕ್‌ಗಳು ಸಹ ಎದುರಾಗುತ್ತಿವೆ. ಇಂಥದೊಂದು ಟಾಸ್ಕ್‌ನ ಝಲಕ್ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಿಕ್ಕಿದೆ. 'ಮೈಕಲ್ ಕನ್ನಡ ಓದೋ ಶೈಲಿಗೆ ದಂಗಾದರಾ ಮನೆಮಂದಿ?' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾಗಳಲ್ಲಿ ಪ್ರೋಮೋ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ. ಪ್ರೋಮೋ ಗಮನಿಸಿದ್ರೆ ಇಂದಿನ ಸಂಚಿಕೆಯಲ್ಲಿ ಮನರಂಜನೆ ಸಿಗೋದಂತೂ ಪಕ್ಕಾ ಎನಿಸುತ್ತಿದೆ.
ತುಕಾಲಿ ಸಂತೋಷ್ ಮತ್ತು ಮೈಕಲ್ ಇಬ್ಬರೂ ಕೇಕ್ ತಿನ್ನುತ್ತಿದ್ದಾರೆ. ಯಾರು ಮೊದಲು ತಿಂದು ತಮ್ಮ ತಲೆ ಮೇಲೆ ಕಟ್ಟಿಕೊಂಡಿರುವ ಗಂಟೆಯನ್ನು ಬಾರಿಸುತ್ತಾರೋ ಅವರಿಗೆ ಮಾತ್ರ ರಸಪ್ರಶ್ನೆಯನ್ನು ಕೇಳುವ ಅಧಿಕಾರ ಸಿಗುತ್ತದೆ. ಈ ಆಟದಲ್ಲಿ ಮೈಕಲ್ ಮೊದಲು ತಿಂದು ತಲೆಮೇಲಿನ ಗಂಟೆ ಬಾರಿಸಿದ್ದಾರೆ. ಅವರ ಮೊದಲ ಪ್ರಶ್ನೆ - ಯಾರ ಜನ್ಮದಿನವನ್ನು ಮಕ್ಕಳ ಜನ್ಮದಿನಾಚರಣೆಯನ್ನಾಗಿ ಆಚರಿಸುತ್ತಾರೆ? ಎಂದಿತ್ತು. ಇಷ್ಟು ಸುಲಭದ ಪ್ರಶ್ನೆಗೆ ಅಷ್ಟೇ ಉತ್ಸಾಹದಿಂದ ಎದ್ದು ನಿಂತ ಅವಿನಾಶ್ ಶೆಟ್ಟಿ, 'ನವೆಂಬರ್ 14' ಎಂದು ಕಿರುಚಿದ್ದಾರೆ. ಪ್ರಶ್ನೆಯನ್ನೇ ಅರ್ಥಮಾಡಿಕೊಳ್ಳುವ ವ್ಯವಧಾನ ಇಲ್ಲದವರು ಸರಿಯಾದ ಉತ್ತರ ಕೊಡಲು ಹೇಗೆ ಸಾಧ್ಯ? ಎಂಬುದು ಕೆಲ ಪ್ರೇಕ್ಷಕರ ಅಭಿಪ್ರಾಯ.