'ಬಾರೋ ಅಂದ್ರೆ ಬರದೆ ಇರ್ತೀವಾ ನಾವು?', 'ಇದು ನಿಮ್ಮ ಆಟ...','ಏನೋ ನಿಮ್...', 'ಹೇಳೋ ಮುಂದಕ್ಕೆ ಹೇಳೋ', 'ಅಗ್ರೆಸಿವ್ ಆಗಿ ಆಡ್ಬೇಕಾ?', 'ಡರ್ಟಿ ಗೇಮ್ ನಾನ್ ತೋರಿಸ್ತೀನಿ'. ಅಬ್ಬಬ್ಬಾ, ಬಿಗ್ ಬಾಸ್ ಮನೆಯಲ್ಲಿ ಮಾತಿನ ಚಕಮಕಿ ತಾರಕಕ್ಕೇರಿದೆ. ಮಾತಿನ ಜೊತೆ ಕೈ ಕೈ ಮಿಲಾಯಿಸುವ, ಎದುರು ಬದಿರು ನಿಂತು ಕೆಣಕುವ ಪ್ರಸಂಗಗಳೂ ನಡೆದಿವೆ. ವಿನಯ್ ಮತ್ತು ಕಾರ್ತಿಕ್ ಮಧ್ಯೆ ಮತ್ತೆ ಬೆಂಕಿ ಹೊತ್ತಿಕೊಂಡಿದೆ.
ಬಿಗ್ ಬಾಸ್ ಪ್ರೋಮೋ ಅನಾವರಣ:ಜಿಯೋ ಸಿನಿಮಾ, ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮಾತಿನ ಕಿಡಿಗಳು ಸಿಡಿಯುತ್ತಿರುವುದನ್ನು ಕಾಣಬಹುದು. ಹೌದು, 'ತಾರಕಕ್ಕೇರಿತಾ ದೋಸ್ತಿಗಳ ಜಿದ್ದಾಜಿದ್ದಿ?' ಎಂಬ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾಗಳಲ್ಲಿ ಅನಾವರಣಗೊಂಡಿರುವ ಕನ್ನಡ ಬಿಗ್ ಬಾಸ್ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಯುದ್ಧಭೂಮಿಯಾದ ಬಿಗ್ ಬಾಸ್ ಮನೆ:ಬಿಗ್ ಬಾಸ್ ಮನೆಯ ಸದಸ್ಯರಿಗೆ ಮಣ್ಣಿನಲ್ಲಿ ಬಣ್ಣದ ಹೂಗಳನ್ನು ನೆಟ್ಟು, ಎದುರಾಳಿ ತಂಡದಿಂದ ಅವುಗಳನ್ನು ಕಾಪಾಡಿಕೊಳ್ಳಬೇಕು ಎಂಬ ಟಾಸ್ಕ್ ನೀಡಲಾಗಿದೆ. ಹೂವಿನಿಂದ ಶುರುವಾದ ಈ ಆಟ ಕೆಲ ಹೊತ್ತಿನಲ್ಲೇ ಯುದ್ಧಭೂಮಿಯಾಗಿದೆ. ಮನೆ ಮಂದಿ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಒಂದು ತಂಡದ ಹೂವನ್ನು ಇನ್ನೊಂದು ತಂಡ ಕಿತ್ತುಕೊಳ್ಳಲು, ಹಾಳು ಮಾಡಲು ಯತ್ನಿಸಿದ್ದೇ ಈ ಮಾತಿನ ಚಕಮಕಿಗೆ ಕಾರಣ. ಒಬ್ಬರು ಇನ್ನೊಬ್ಬರನ್ನು ಎಳೆದಾಡಿ, ಜಗಳವಾಡಿಕೊಳ್ಳುವವರೆಗೂ ಮುಟ್ಟಿದೆ. ತುಕಾಲಿ ಸಂತೋಷ್, ಪ್ರತಾಪ್ ಅವರನ್ನು ನೆಲಕ್ಕುರುಳಿಸಿ ಹೂವುಗಳನ್ನು ಹಾಳು ಮಾಡಿದ್ದಾರೆ. ಕಾರ್ತಿಕ್ ಎದುರಾಳಿ ತಂಡದ ಹೂಬುಟ್ಟಿಯನ್ನು ಹೊತ್ತೊಯ್ದಿದ್ದಾರೆ. ಹಿಂಬಾಲಿಸಿದ ವಿನಯ್ ಅವರನ್ನು ಜಗ್ಗಾಡಿದ್ದಾರೆ. ಮೈಕಲ್ ಹೂಬುಟ್ಟಿ ಗಟ್ಟಿಯಾಗಿ ಹಿಡಿದುಕೊಂಡರೆ, ಉಳಿದವರೆಲ್ಲ ಅವರ ಮೇಲೆ ಬಿದ್ದಿದ್ದಾರೆ.