ಭಾರತೀಯ ಚಿತ್ರರಂಗದಲ್ಲಿ ನಟರು, ನಿರ್ದೇಶಕರುಗಳ ಸ್ನೇಹದ ಬಗ್ಗೆ ನಿಮಗೆ ತಿಳಿದೇ ಇದೆ. ಸ್ಟಾರ್ ನಟರು ಪರಸ್ಪರ ಬಹಳ ಫ್ರೆಂಡ್ಲಿ ಆಗಿ ಕಾಣಿಸಿಕೊಳ್ಳುತ್ತಾರೆ. ಪರಸ್ಪರ ಸಿನಿಮಾ ಈವೆಂಟ್ಗಳಲ್ಲಿ ಭಾಗವಹಿಸುತ್ತಾರೆ. ಜೊತೆಗೆ, ಸ್ನೇಹ ಸಂಬಂಧದ ಕುರಿತು ಅಭಿಮಾನಿಗಳಿಗೆ ಸ್ಫೂರ್ತಿ ನೀಡುತ್ತಾರೆ. ಇಂದಿನ ಪೀಳಿಗೆಯ ಮಕ್ಕಳೂ ಸಹ ಆ ಸಂಪರ್ಕ, ಸ್ನೇಹ ಮುಂದುವರಿಸಲು ಹೊರಟಿದ್ದಾರೆ ಎಂಬುದು ಗಮನಾರ್ಹ ವಿಷಯ.
ಸ್ಟಾರ್ ಕಿಡ್ಸ್ ಸಿನಿಮಾಗಳು:ಸ್ಟಾರ್ ಕಿಡ್ಸ್ ಈಗಾಗಲೇ ಟಾಲಿವುಡ್ ಇಂಡಸ್ಟ್ರಿಗೆ ಒಬ್ಬರ ನಂತರ ಒಬ್ಬರಂತೆ ಎಂಟ್ರಿಯಾಗಿದ್ದಾರೆ. ರವಿತೇಜ, ಸುಧೀರ್ ಬಾಬು, ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಇತರೆ ನಾಯಕ ನಟರ ಮಕ್ಕಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿತೇಜ ಅವರ ಮಗ ರಾಜಾ ದಿ ಗ್ರೇಟ್ ಚಿತ್ರದಲ್ಲಿ, ಭಲೇ ಭಲೇ ಮಗಾಡಿವೋಯ್ ಚಿತ್ರದಲ್ಲಿ ಸುಧೀರ್ ಬಾಬು ಮಗ ನಟಿಸಿದ್ದರೆ, ಅಲ್ಲು ಅರ್ಜುನ್ ಪುತ್ರಿ ಶಾಕುಂತಲಂ ಸಿನಿಮಾದಲ್ಲಿ, ಮಹೇಶ್ ಬಾಬು ಪುತ್ರಿ ಸರ್ಕಾರು ವಾರಿ ಪಾಟ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಪರಿಚಯವಾಗಿದ್ದಾರೆ.
ಜೂ. ಎನ್ಟಿಆರ್ ಮಗ ಅಭಯ್ ರಾಮ್: ಇದೀಗ ಆರ್ಆರ್ಆರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅವರ ಹಿರಿಯ ಮಗ ಅಭಯ್ ರಾಮ್ ಕೂಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆಂಬ ಮಾಹಿತಿ ಇದೆ. ಇತ್ತ ಮಗಳು ಸಿತಾರಾ ಜೊತೆ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಮೌಳಿ ಸಿನಿಮಾದಲ್ಲಿ ಸ್ಟಾರ್ ಕಿಡ್ಸ್: ಬಾಹುಬಲಿ, ಆರ್ಆರ್ಆರ್ ಖ್ಯಾತಿಯ ಲೆಜೆಂಡರಿ ಡೈರೆಕ್ಟರ್ ಎಸ್ಎಸ್ ರಾಜಮೌಳಿ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಅಭಯ್ ರಾಮ್ ಎಂಟ್ರಿ ಕೊಡಲಿದ್ದಾರೆ. ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಶನ್ನಲ್ಲಿ ಬಿಗ್ ಬಜೆಟ್ನ ಆ್ಯಕ್ಷನ್ ಸಿನಿಮಾ ಮೂಡಿಬರಲಿದೆ. ಸದ್ಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ನಟರ ಇಂಟ್ರೂಡಕ್ಷನ್ ಸೀನ್ ಸುಮಾರು 20 ನಿಮಿಷ ಇರಲಿದೆ ಎಂದು ತಿಳಿದುಬಂದಿದೆ.