ಕಾಲಿವುಡ್ ಸೂಪರ್ಸ್ಟಾರ್ ರಜಿನಿಕಾಂತ್ ನಟನೆಯ 'ಜೈಲರ್' ಸಿನಿಮಾ ಗುರುವಾರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಚಿತ್ರ ವೀಕ್ಷಿಸಿ, ಬೆಂಬಲ ನೀಡಿದ್ದಾರೆ. ಮೊದಲ ದಿನ ಎಲ್ಲೆಡೆ ಹೌಸ್ಫುಲ್ ಶೋ ಕಂಡಿದೆ. ವಿಶ್ವದಾದ್ಯಂತ 7000 ಸ್ಕ್ರೀನ್ಗಳಲ್ಲಿ ಭರ್ಜರಿ ಓಪನಿಂಗ್ನೊಂದಿಗೆ ಕಲೆಕ್ಷನ್ ವಿಚಾರದಲ್ಲಿ ದಾಖಲೆಯ ಓಟ ಮುಂದುವರೆಸಿದೆ. ಜೊತೆಗೆ 2023ರ ಅತಿ ಹೆಚ್ಚು ಗಳಿಕೆಯ ಮೊದಲ ತಮಿಳು ಚಿತ್ರ ಎಂಬ ಹೆಗ್ಗಳಿಕೆಗೂ ಜೈಲರ್ ಪಾತ್ರವಾಗಿದೆ.
ದಾಖಲೆ ಬರೆದ 'ಜೈಲರ್': 'ಜೈಲರ್' ಸಿನಿಮಾ ಬಿಡುಗಡೆಯಾದ ದಿನದಂದೇ ಹಲವಾರು ಗಮನಾರ್ಹ ದಾಖಲೆ ಬರೆದಿದೆ. ಇದು ತಮಿಳುನಾಡು ಮತ್ತು ಕೇರಳದಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ತಮಿಳು ಚಿತ್ರವೊಂದು ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ. ಈ ವರ್ಷ 'ಜೈಲರ್' ಎಂಬ ತಮಿಳು ಚಿತ್ರ ಇಡೀ ಭಾರತದಲ್ಲಿ ಬಿಗ್ ರಿಲೀಸ್ನೊಂದಿಗೆ ಮೊದಲ ದಿನವೇ ದಾಖಲೆಯ ಗಳಿಕೆ ಕಂಡಿದೆ. ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಹ ಸಿಕ್ಕಿದೆ.
ಮೊದಲ ದಿನದ ಕಲೆಕ್ಷನ್: ಸ್ಯಾಕ್ನಿಲ್ಕ್ನ ವರದಿ ಪ್ರಕಾರ, 'ಜೈಲರ್' ಸಿನಿಮಾ ಮೊದಲ ದಿನವೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆರಂಭಿಕ ಅಂದಾಜಿನ ಪ್ರಕಾರ, ಚಿತ್ರವು ತನ್ನ ಮೊದಲ ದಿನ 52 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ತಮಿಳುನಾಡಿನಿಂದ 23 ಕೋಟಿ ರೂ., ಕರ್ನಾಟಕದಿಂದ 11 ಕೋಟಿ ರೂ., ಕೇರಳದಿಂದ 5 ಕೋಟಿ ರೂ., ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 10 ಕೋಟಿ ರೂ. ಮತ್ತು ಇತರ ರಾಜ್ಯಗಳಿಂದ 3 ಕೋಟಿ ರೂ. ಬಾಚಿಕೊಂಡಿದೆ.