ನವದೆಹಲಿ: 200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರೂ ಕೂಡ ಅವರನ್ನು ಏಕೆ ಬಂಧಿಸಲಿಲ್ಲವೆಂದು ಪಟಿಯಾಲ ನ್ಯಾಯಾಲಯ ಇಂದು ಇಡಿ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಅರ್ಜಿಯನ್ನು ಪಟಿಯಾಲ ನ್ಯಾಯಾಲಯ ಇಂದು ವಿಚಾರಣೆ ನಡೆಸಿತು. ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಕೋರ್ಟ್‌ಗೆ ನಟಿ ಹಾಜರಾದರು. ಇದಕ್ಕೂ ಮೊದಲು ನ್ಯಾಯಾಲಯವು ನಟಿಗೆ ನವೆಂಬರ್ 10ರ ವರೆಗೆ ಮಧ್ಯಂತರ ಜಾಮೀನು ವಿಸ್ತರಿಸಿತ್ತು. ಅವರ ಪರ ವಕೀಲ ಪ್ರಶಾಂತ್ ಪಾಟೀಲ್, ಸಿದ್ಧಾರ್ಥ್ ಅಗರ್ವಾಲ್ ವಾದ ಮಂಡಿಸಿದರು. ನಟಿ ಈವರೆಗೆ 5 ಬಾರಿ ತನಿಖೆಗೆ ಹಾಜರಾಗಿ ಸಹಕರಿಸಿದ್ದಾರೆಂದು ತಿಳಿಸಿದರು.
ಪಟಿಯಾಲ ಕೋರ್ಟ್‌ಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆದರೆ ತನಿಖೆಗೆ ಸಹಕರಿಸಿಲ್ಲ ಎಂದು ಇಡಿ ತಿಳಿಸಿದೆ. "ಅವರು 7 ಕೋಟಿ ರೂಪಾಯಿಗಳ ಅಪರಾಧದ ಆದಾಯವನ್ನು ಹೊಂದಿದ್ದರು, ಅದನ್ನು ಬಳಸಿ ಆನಂದಿಸಿದರು" ಎಂದು ಇಡಿ ವಾದಿಸಿತು.
ವಂಚಕ ಸುಕೇಶ್ ಚಂದ್ರಶೇಖರ್ ಆರೋಪಿಯಾಗಿರುವ ಈ ಪ್ರಕರಣದಲ್ಲಿ ನಟಿಯ ಹೆಸರು ಆರೋಪಿಯ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಅವರ ಬಂಧನ ವಿಷಯದಲ್ಲಿ ತನಗೆ ಬೇಕಾದಂತೆ ವರ್ತಿಸುತ್ತಿರುವ ತನಿಖಾ ಸಂಸ್ಥೆಯ ಕಾರ್ಯವೈಖರಿಯನ್ನು ಪೀಠ ಟೀಕಿಸಿತು.
ಈ ಹಿಂದೆ ಜಾಕ್ವೆಲಿನ್ ಅವರಿಗೆ ಮಧ್ಯಂತರ ಜಾಮೀನು ನೀಡಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ಜಾಕ್ವೆಲಿನ್ ಪರ ವಕೀಲರು ಮತ್ತು ಇ.ಡಿ ಪರ ವಕೀಲರ ವಾದ-ಪ್ರತಿವಾದ ಆಲಿಸಿ, ನಂತರ ಅವರ ಜಾಮೀನು ಅರ್ಜಿಯ ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದರು.
ಇದನ್ನೂ ಓದಿ:ದೆಹಲಿ ಕೋರ್ಟ್‌ಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್
ಹಣದ ಕೊರತೆಯಿಲ್ಲದ ಕಾರಣ ಜಾಕ್ವೆಲಿನ್ ಸುಲಭವಾಗಿ ದೇಶದಿಂದ ಪರಾರಿಯಾಗಬಹುದು ಎಂದು ಸಂಸ್ಥೆ ಸಲ್ಲಿಸಿದ ಮನವಿ ವಿಚಾರಣೆ ನಡೆಸಿದ ನ್ಯಾಯಾಲಯ, ನಟಿಯನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿತು. ನಟಿ ದೇಶ ತೊರೆಯುವುದನ್ನು ತಡೆಯಲು ವಿಮಾನ ನಿಲ್ದಾಣಗಳಲ್ಲಿ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಲಾಗಿದೆ ಎಂದು ಇ.ಡಿ ತಿಳಿಸಿತು.