95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ತಯಾರಿಗಳು ಅಂತಿಮ ಹಂತದಲ್ಲಿವೆ. ಪ್ರಪಂಚದ ಪ್ರತಿಷ್ಟಿತ ಪ್ರಶಸ್ತಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಾರತೀಯರು ಬಹಳ ಉತ್ಸುಕರಾಗಿದ್ದಾರೆ.
ಆಸ್ಕರ್ ಬಗ್ಗೆ ಸಕಾರಾತ್ಮಕ ನಿರೀಕ್ಷೆ: 95ನೇ ಆಸ್ಕರ್ ಪ್ರಶಸ್ತಿಯ ಅಂತಿಮ ನಾಮನಿರ್ದೇಶನ ಪಟ್ಟಿ ಬಿಡುಗಡೆಯಾದ ನಂತರ ಭಾರತೀಯ ಚಿತ್ರರಂಗದ ತೋರಿದ ಉತ್ಸಾಹ ಪದಗಳಲ್ಲಿ ವರ್ಣಿಸಲಾಗದ್ದು. ಆಸ್ಕರ್ ನಾಮಿನೇಶನ್ ಪಟ್ಟಿಯಲ್ಲಿ ಮೂರು ಭಾರತೀಯ ಚಲನಚಿತ್ರಗಳ ಹೆಸರುಗಳಿವೆ. ಈ ಬಾರಿಯ ಆಸ್ಕರ್ ಬಗ್ಗೆ ನಮ್ಮ ದೇಶದಲ್ಲಿ ಸಾಕಷ್ಟು ಸಕಾರಾತ್ಮಕ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಮೂರು ಚಿತ್ರಗಳಿಗೆ ಸಂಬಂಧಿಸಿದ ನಟರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಸಿನಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲು ಲಾಸ್ ಏಂಜಲೀಸ್ ತಲುಪಿದ್ದಾರೆ.
3 ಚಿತ್ರಗಳು ನಾಮಿನೇಟ್:95ನೇ ಆಸ್ಕರ್ ಪ್ರಶಸ್ತಿಗಾಗಿ ಸುಮಾರು 300 ಚಿತ್ರಗಳ ನಡುವೆ ಹೋರಾಟ ನಡೆಯಿತು. ನಮ್ಮ ದೇಶದ 4 ಚಿತ್ರಗಳು ಆಯ್ಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆ ಪೈಕಿ 3 ಚಿತ್ರಗಳು ಮಾತ್ರ ಅಂತಿಮ ಪಟ್ಟಿಗೆ ಬರಲು ಸಾಧ್ಯವಾಯಿತು. ಈ ಚಿತ್ರಗಳಲ್ಲಿ ಎಸ್‌ಎಸ್ ರಾಜಮೌಳಿ ಅವರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಚಿತ್ರ 'ಆರ್ಆರ್ಆರ್' ಸೇರಿದೆ. 95ನೇ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಉಳಿದಂತೆ, 'ಆಲ್ ದಟ್ ಬ್ರೀಥ್ಸ್', 'ದಿ ಎಲಿಫೆಂಟ್ ವಿಸ್ಪರ್ಸ್' ಎಂಬ ಕಿರುಚಿತ್ರಗಳೂ ಕೂಡ ಆಯ್ಕೆ ಆಗಿದೆ.
ಗೆಲ್ಲುವ ವಿಶ್ವಾಸದಲ್ಲಿ ಭಾರತ: 2023ರ ಆಸ್ಕರ್‌ನಲ್ಲಿ ಮೂರು ವಿಭಿನ್ನ ಚಲನಚಿತ್ರಗಳು ಆಯ್ಕೆಯಾಗಿದ್ದು, ಗೆಲ್ಲುವ ವಿಶ್ವಾಸದಲ್ಲಿ ಭಾರತವಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ ಎರಡು ಚಿತ್ರಗಳು ಆಯ್ಕೆಯಾಗಿವೆ. ಇದರೊಂದಿಗೆ ಎಸ್.ಎಸ್ ರಾಜಮೌಳಿ ಅವರ ಆರ್ಆರ್ಆರ್ ಜನಪ್ರಿಯ ಹಾಡು ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗುವ ಮೂಲಕ ಆಸ್ಕರ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಈ ಮೂರೂ ನಾಮಿನೇಶನ್ಗಳ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.