ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಗಳ ಎಂಟ್ರಿ ಆಗುತ್ತಲೇ ಇದೆ. ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ನಾಲ್ಕೈದು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಆರೋಬ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ 'ಶಿವಾಜಿ ಬಹದ್ದೂರ್'. ಈ ಚಿತ್ರದಲ್ಲಿ ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಶಿವಾಜಿ ಬಹದ್ದೂರ್ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಹೆಚ್ ವಾಸು, ಸ್ವಸ್ತಿಕ್ ಶಂಕರ್, ನಟ ಷಣ್ಮುಖ ಗೋವಿಂದರಾಜು, ಗಾಯಕ ಆಲೂರು ನಾಗಪ್ಪ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಚಿತ್ರದ ಬಗ್ಗೆ ಮಾತು ಶುರುಮಾಡಿದ ನಿರ್ದೇಶಕ ಆರೋನ್ ಕಾರ್ತಿಕ್, "ಶಿವಾಜಿ ಬಹದ್ದೂರ್ ಎಂದರೆ ಎರಡು ಪಾತ್ರಗಳ ಹೆಸರು. ನಮ್ಮ ಚಿತ್ರದಲ್ಲಿ ಶಿವಾಜಿ ಎಂಬುದು ಪ್ರಧಾನ ಮಂತ್ರಿ ಪಾತ್ರದ ಹೆಸರು. ಬಹದ್ದೂರ್ ಎಂದರೆ ಮುಖ್ಯಮಂತ್ರಿ ಪಾತ್ರದ ಹೆಸರು. ಶಿವಾಜಿ ಪಾತ್ರದ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳುತ್ತದೆ. ಬಹದ್ದೂರ್ ಅಂದರೆ ಮುಖ್ಯಮಂತ್ರಿ ಪಾತ್ರದಲ್ಲಿ ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ. ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ (ಭಯೋತ್ಪಾದನೆ) ತಡೆಗಟ್ಟಲು ಹೋರಾಡುವ ಉತ್ತಮ ಮುಖ್ಯಮಂತ್ರಿಯಾಗಿ ರಾಜ್ ಬಹದ್ದೂರ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ವಿಲನ್ ಪಾತ್ರದಲ್ಲಿ ಖ್ಯಾತ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ನಟಿಸಲಿದ್ದಾರೆ" ಎಂದು ತಿಳಿಸಿದರು.