ಕರ್ನಾಟಕ

karnataka

ETV Bharat / entertainment

'ಭಯದ ಜೊತೆಗೆ ತುಂಬಾ ನೋವಾಯಿತು': ಫೇಕ್​ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ - ಈಟಿವಿ ಭಾರತ ಕನ್ನಡ

Rashmika Mandanna reacts to deepfake video: ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ನಕಲಿ ವಿಡಿಯೋ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

'I feel really hurt...extremely scary': Rashmika Mandanna reacts to deepfake video
'ಭಯದ ಜೊತೆಗೆ ತುಂಬಾ ನೋವಾಯಿತು': ಫೇಕ್​ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

By ETV Bharat Karnataka Team

Published : Nov 6, 2023, 4:57 PM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಆಗ್ರಹಿಸಿದ್ದಾರೆ. ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ಫೇಕ್​ ವಿಡಿಯೋ ಕುರಿತು ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. 'ನನಗೆ ಈ ವಿಚಾರ ನಿಜಕ್ಕೂ ನೋವುಂಟು ಮಾಡಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ, "ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆನ್​ಲೈನ್​ನಲ್ಲಿ ವೈರಲ್​ ಆಗುತ್ತಿರುವ ನನ್ನ ಡೀಪ್​ಫೇಕ್​ ವಿಡಿಯೋ ಬಗ್ಗೆ ಮಾತನಾಡಬೇಕಿದೆ. ನಿಜವಾಗಿಯೂ ಇದನ್ನು ನೋಡಿ ಭಯವಾಯಿತು. ನನಗೊಬ್ಬಳಿಗೆ ಮಾತ್ರವಲ್ಲ, ತಂತ್ರಜ್ಞಾನವನ್ನು ಈ ರೀತಿ ದುರುಪಯೋಗಪಡಿಸಿ ಕೊಳ್ಳುತ್ತಿರುವುದರಿಂದ ನನ್ನಂತೆಯೇ ಅನೇಕ ಜನರಿಗೆ ನೋವಾಗಿರಬಹುದು" ಎಂದಿದ್ದಾರೆ.

" ಇಂದು ನಾನೊಬ್ಬಳು ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ನಿಂತಿರುವ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ಒಂದು ವೇಳೆ ನಾನು ಶಾಲೆ ಅಥವಾ ಕಾಲೇಜಿನಲ್ಲಿರುವಾಗ ಈ ರೀತಿ ಸಂಭವಿಸಿದ್ದರೆ, ನಾನು ಹೇಗೆ ನಿಭಾಯಿಸುತ್ತಿದ್ದೆ ಎಂದು ನಿಜವಾಗಿಯೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಸಮಸ್ಯೆಯನ್ನು ಎದುರಿಸುವುಕ್ಕೂ ಮುನ್ನ ಇದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ" ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ:ಸ್ಟೈಲಿಶ್ ಡ್ರೆಸ್​ನಲ್ಲಿ ರಶ್ಮಿಕಾ ಮಂದಣ್ಣ ಬೊಂಬಾಟ್​ ಲುಕ್.. ಕಿರಿಕ್​ ಬೆಡಗಿಯ​​ ಹೊಸ ಫೋಟೋ

ರಶ್ಮಿಕಾ ಫೇಕ್​ ವಿಡಿಯೋ ವೈರಲ್: ಫಿಟ್ ಡ್ರೆಸ್​ ಹಾಕಿ ಲಿಫ್ಟ್​ ಏರುತ್ತಿರುವ ದೃಶ್ಯವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಮುಖವಿದೆ. ಆದರೆ ಈ ವಿಡಿಯೋ ಅಸಲಿಗೆ ಇದು ಮತ್ತೊಬ್ಬ ಯುವತಿಯದ್ದು​. ಅಕ್ಟೋಬರ್​ 8ರಂದು ಆ ಯುವತಿ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ತಮ್ಮ ವಿಡಿಯೋ ಹಂಚಿಕೊಂಡಿದ್ದರು. ಅದೇ ವಿಡಿಯೋಗೆ ಎಐ ತಂತ್ರಜ್ಞಾನ ಬಳಸಿ ಯಾರೋ ಕಿಡಿಗೇಡಿಗಳು ಆಕೆಯ ಮುಖಕ್ಕೆ ರಶ್ಮಿಕಾ ಮುಖವನ್ನು ಜೋಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಆದರೆ, ಭಾರತೀಯ ಪತ್ರಕರ್ತ ಅಭಿಷೇಕ್ ಕುಮಾರ್ ಎಂಬವರು ವಿಡಿಯೋದ ಫ್ಯಾಕ್ಟ್​ ಚೆಕ್​ ಮಾಡಿದ್ದಾರೆ. ಮೂಲ ವಿಡಿಯೋವನ್ನು ಪತ್ತೆ ಹಚ್ಚಿ ಎಡಿಟೆಡ್​ ಹಾಗೂ ಒರಿಜಿನಲ್​ ಎರಡೂ ವಿಡಿಯೋಗಳನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾರದ್ದೇ ಎನ್ನಲಾದ ವೈರಲ್​ ವಿಡಿಯೋ ನಿಜವಾಗಿಯೂ ಅವರದ್ದಲ್ಲ. ಬೇರೊಬ್ಬ​ ಯುವತಿಯ ವಿಡಿಯೋ ಇದು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇಂತಹ ವಿಡಿಯೋ ವೈರಲ್​ ಆಗುತ್ತಿರುವ ಹಿಂದಿನ ಜಾಡು ಪತ್ತೆ ಹಚ್ಚಿ, ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದೂ ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಅನ್ನು ಮರು ಹಂಚಿಕೊಂಡಿರುವ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಟಿ ರಶ್ಮಿಕಾ ಮಂದಣ್ಣ ಫೇಕ್​ ವಿಡಿಯೋ ವೈರಲ್; 'ಕ್ರಮ ಕೈಗೊಳ್ಳಿ' ಎಂದ ಅಮಿತಾಭ್​ ಬಚ್ಚನ್​

ABOUT THE AUTHOR

...view details