ಹಿಂದಿ ಚಿತ್ರರಂಗ ನಟರಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆ ಆಗಿದ್ದು ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದೆ. ಇಂದು ಅದ್ಧೂರಿಯಾಗಿ ರಿಲೀಸ್ ಆಗಿರುವ ಈ 'ವಿಕ್ರಮ್ ವೇದ' ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹೃತಿಕ್, ಸೈಫ್ ನಟನೆಗೆ ಜೈಕಾರ ಹಾಕಿದ್ದಾರೆ.
ವಿಕ್ರಮ್ ವೇದ ತಮಿಳು ಚಿತ್ರದ ಹಿಂದಿ ರಿಮೇಕ್. ಮೂಲ ಚಿತ್ರ ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಹಿಂದಿ ಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ. ಸೌತ್ ನಟರಾದ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ಕಾಲಿವುಡ್ನ ಬ್ಲಾಕ್ಬಸ್ಟರ್ ವಿಕ್ರಮ್ ವೇದ ಹಿಂದಿಗೆ ರಿಮೇಕ್ ಆಗಿ ಇಂದು ಥಿಯೇಟರ್ಗಳಲ್ಲಿ ಅಬ್ಬರಿಸಿದೆ. ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆ ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ದರೋಡೆಕೋರನನ್ನು ಪತ್ತೆಹಚ್ಚಲು ಹೊರಡುವ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೈಫ್ ಅಲಿ ಖಾನ್ ನಟಿಸಿದ್ದು, ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.