ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಜೊತೆ ಜೊತೆಗೆ ಹೆಡ್ ಬುಷ್ ಸಿನಿಮಾಗೆ ಹಲವು ವಿವಾದಗಳು ಸುತ್ತಿಕೊಂಡಿವೆ. ಹೆಡ್ ಬುಷ್ ಸಿನೆಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂದು ವೀರಗಾಸೆ ಸಮುದಾಯದ ಮುಖಂಡರು ಹೆಡ್ ಬುಷ್ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವೀರಗಾಸೆ ಕಲಾವಿದರು ಶೂ ಧರಿಸುವುದಿಲ್ಲ. ಆದರೆ ಈ ಚಿತ್ರದಲ್ಲಿ ಶೂ ಧರಿಸಿರುವುದು ಹಾಗು ವೀರಗಾಸೆ ಕಲಾವಿದರನ್ನು ಹೊಡೆಯುವ ದೃಶ್ಯವನ್ನು ತೋರಿಸುವ ಮೂಲಕ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿನ್ನೆಯಷ್ಟೇ ವೀರಗಾಸೆ ಕಲಾವಿದರನ್ನು ಭೇಟಿ ಮಾಡಿ ಚಿತ್ರತಂಡ ಸ್ಪಷ್ಟನೆ ನೀಡಿತ್ತು.
ಜೊತೆಗೆ ಹೆಡ್ ಬುಷ್ ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅಂದರೆ, ದೈವದ ಬಗ್ಗೆ ಬಹಳ ಹಗುರವಾದ ಪದಗಳ ಬಳಕೆ ಮಾಡಲಾಗಿದೆ. ಸಂಪ್ರದಾಯ ಬದ್ಧ ದೈವದ ಆಚರಣೆಯನ್ನು ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪ ಮಾಡಿತ್ತು. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಒಂದು ಮನವಿಯನ್ನು ಕೊಟ್ಟಿದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಂಧಾನ ಸಭೆ: ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೆಡ್ ಬುಷ್ ಚಿತ್ರದ ನಾಯಕ ಹಾಗು ನಿರ್ಮಾಪಕ ಧನಂಜಯ್, ಕಥೆಗಾರ ಅಗ್ನಿ ಶ್ರೀಧರ್ ಹಾಗು ಧರ್ಮರಾಯ ಸ್ವಾಮಿ ವ್ಯವಸ್ಥಾಪಕ ಸಮಿತಿ ಸದಸ್ಯರನ್ನು ಕರೆಯಿಸಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸುಂದರ್ ರಾಜ್ ಹಾಗು ಹಿರಿಯ ನಿರ್ಮಾಪಕ ಚೆನ್ನೇಗೌಡ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಧ್ಯಕ್ಷ ಭಾ.ಮಾ ಹರೀಶ್, ಧನಂಜಯ್, ಅಗ್ನಿ ಶ್ರೀಧರ್ ಮತ್ತು ಧರ್ಮರಾಯ ಸ್ವಾಮಿ ವ್ಯವಸ್ಥಾಪಕ ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿ ವಿವಾದಕ್ಕೆ ತೆರೆ ಎಳೆದರು. ಹೆಡ್ ಬುಷ್ ಚಿತ್ರದಲ್ಲಿ ಬಳಸಲಾಗಿರುವ ಜುಜಿಬಿ ಕರಗ ಪದವನ್ನು ಮ್ಯೂಟ್ ಮಾಡಲು ಚಿತ್ರತಂಡ ಒಪ್ಪಿಕೊಂಡಿದ್ದು, ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಫಲವಾಗಿದೆ.