ಪೌರಾಣಿಕ ಸಿನಿಮಾ 'ಆದಿಪುರುಷ್' ಮೇಲೆ ಟೀಕೆಗಳ ಸುರಿಮಳೆ ಮುಂದುವರಿದಿದೆ. ಕಂಟೆಂಟ್, ವಿಎಫ್‌ಎಕ್ಸ್, ಡೈಲಾಗ್ಸ್ ಮತ್ತು ಪಾತ್ರಗಳ ಚಿತ್ರೀಕರಣದಲ್ಲಿ ನಿರ್ದೇಶಕರು ಮಾಡಿದ ತಪ್ಪುಗಳನ್ನು ಪ್ರೇಕ್ಷಕರು ಕಂಡು ಹಿಡಿಯುತ್ತಿದ್ದಾರೆ. ಈ ಸಂದರ್ಭದಲ್ಲಿ, ಗೈಟಿ ಗ್ಯಾಲಾಕ್ಸಿಯ (Gaiety Galaxy) ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ಅವರು ಇದೇ ವಿಷಯಕ್ಕೆ ಸಂಬಂಧಿಸಿದಂತೆ 'ಆದಿಪುರುಷ್' ಚಿತ್ರತಂಡವನ್ನು ಟೀಕಿಸಿದ್ದಾರೆ. ಆದಿಪುರುಷ್ ವಿಷಯದಲ್ಲಿ ನಿಮ್ನನ್ನು ದೇವರೂ ಕೂಡ ಕ್ಷಮಿಸುವುದಿಲ್ಲ ಎಂದು ಸಿಡಿದೆದ್ದಿದ್ದಾರೆ.
ಥಿಯೇಟರ್ ಮಾಲೀಕರಿಗೆ ನಷ್ಟ: "ಪ್ರೇಕ್ಷಕರು ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ. ನಿನ್ನೆ ಎರಡು ಶೋಗಳನ್ನು ರದ್ದುಗೊಳಿಸಲಾಗಿದೆ. ನೆಗೆಟಿವ್ ಟಾಕ್ ಬಂದಿದ್ದರಿಂದ ಇಂದಿನ ಪ್ರದರ್ಶನಗಳನ್ನು ಕೂಡ ರದ್ದುಗೊಳಿಸಬೇಕಾಗಿದೆ. ಶೀಘ್ರದಲ್ಲೇ ಈ ಚಿತ್ರವನ್ನು ಥಿಯೇಟರ್‌ಗಳಿಂದ ತೆಗೆದುಹಾಕಲಾಗುತ್ತದೆ. ಅಂತಹ ದಿನ ಬರುತ್ತದೆ ಎಂದು ನಾವು ಎಂದಿಗೂ ಯೋಚಿಸಿರಲಿಲ್ಲ. ನಮ್ಮ ಥಿಯೇಟರ್ನಲ್ಲಿ ಮಾತ್ರವಲ್ಲ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಥಿಯೇಟರ್ ಮಾಲೀಕರಿಗೆ ಈಗಾಗಲೇ ನಷ್ಟವಾಗಿದೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು (ಆದಿಪುರುಷ್ ನಿರ್ಮಾಪಕರು). ಈ ಚಿತ್ರವು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಎಲ್ಲರಿಗೂ, ಅದರಲ್ಲೂ ಮುಖ್ಯವಾಗಿ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಅಸಮಾಧಾನ ಹೊರಹಾಕಿದರು.
ಬಿಡುಗಡೆಯಾದ ಬಳಿಕದ ಬದಲಾವಣೆಯಲ್ಲಿ ಅರ್ಥವಿಲ್ಲ: ವಿವಾದಾತ್ಮಕ ಸಂಭಾಷಣೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಆದರೆ ಅದು ಬಹಳ ತಡವಾಗಿತ್ತು. ಬಿಡುಗಡೆ ಆದ ನಂತರ ಚಿತ್ರದಲ್ಲಿನ ಸಂಭಾಷಣೆಗಳನ್ನು ಬದಲಾಯಿಸುವುದರಲ್ಲಿ ಅರ್ಥವಿಲ್ಲ ಎಂದು ಮನೋಜ್ ದೇಸಾಯಿ ಹೇಳಿದರು.
ನೇಪಾಳದಲ್ಲಿ ಭಾರತೀಯ ಸಿನಿಮಾ ಪ್ರದರ್ಶನ ಪ್ರಾರಂಭ: ಸೀತೆ ಭಾರತದ ಮಗಳು ಎಂಬ ಡೈಲಾಗ್ ನೇಪಾಳ ಸರ್ಕಾರವನ್ನು ಕೆರಳಿತ್ತು. ಆದಿಪುರುಷ್ ಸಿನಿಮಾದ ಜೊತೆಗೆ ಎಲ್ಲಾ ಭಾರತೀಯ ಸಿನಿಮಾಗಳೂ ರದ್ದಾಗಿದ್ದವು. ಆದರೆ, ಇದೀಗ ನಿಷೇಧ ತೆರವುಗೊಂಡಿದ್ದು, ಶುಕ್ರವಾರದಿಂದ 'ಆದಿಪುರುಷ್' ಚಿತ್ರ ಬಿಟ್ಟು ಉಳಿದೆಲ್ಲ ಚಿತ್ರಗಳ ಪ್ರದರ್ಶನ ಪುನರಾರಂಭಗೊಂಡಿದೆ. ಇದನ್ನು ನೇಪಾಳ ಮೋಷನ್ ಪಿಕ್ಚರ್ ಅಸೋಸಿಯೇಷನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.