ಬೆಂಗಳೂರು: ಕಾಪಿರೈಟ್ಸ್ ಉಲ್ಲಂಘಿಸಿ ಎನ್‌ಜಿಒ ಸಂಸ್ಥೆಗೆ ಆರ್ಥಿಕ ನಷ್ಟ ಉಂಟುಮಾಡಿದ ಆರೋಪದಡಿ ಕನ್ನಡ ಸಿನಿಮಾ ನಿರ್ದೇಶಕ ಜೇಕಬ್ ವರ್ಗೀಸ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಪ್ರತಿನಿಧಿಯಾಗಿರುವ ಇಲ್ವಿಸ್ ಜೋಸೆಫ್ ಎಂಬವರು ನೀಡಿದ ದೂರಿನನ್ವಯ, ನ್ಯಾಯಾಲಯದಿಂದ ಬಂದ ಆದೇಶಾನುಸಾರ ಜೇಕಬ್ ವರ್ಗೀಸ್, ದಿನೇಶ್ ರಾಜ್‍ಕುಮಾರ್ ಹಾಗೂ ಮ್ಯಾಥ್ಯೂ ವರ್ಗೀಸ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.
ದೂರಿನ ಸಾರಾಂಶ: ವಿಶೇಷಚೇತನ ಮಕ್ಕಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದ ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆ, 'ಚಾಂಪಿಯನ್ ಇನ್ ಮಿ' ಹೆಸರಿನಲ್ಲಿ ಹೆಚ್ಐವಿ ಪೀಡಿತ ಮಕ್ಕಳಿಗೆ ಮ್ಯಾರಥಾನ್ನಲ್ಲಿ ಭಾಗವಹಿಸುವ ತರಬೇತಿ ನೀಡುತ್ತಿತ್ತು. ಅದರ ಭಾಗವಾಗಿ ಜಗತ್ತಿನ ವಿವಿಧೆಡೆ ಮ್ಯಾರಥಾನ್ನಲ್ಲಿ ಭಾಗವಹಿಸುವ ಇಬ್ಬರು ಕ್ರೀಡಾಪಟುಗಳ ಜೀವನಕ್ರಮದ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡುವ ಜವಾಬ್ದಾರಿಯನ್ನು ಜೇಕಬ್ ವರ್ಗೀಸ್‌ಗೆ ನೀಡಲಾಗಿತ್ತು. ನಾಲ್ಕು ವರ್ಷಗಳ ಅವಧಿಗೆ ಕ್ರೀಡಾಪಟುಗಳು ಭಾಗವಹಿಸುವ ಎಲ್ಲಾ ಕ್ರೀಡಾಕೂಟಗಳ ಚಿತ್ರೀಕರಣದ ಕಾಪಿರೈಟ್ಸ್ ಹಾಗೂ ವೆಚ್ಚ ಭರಿಸುವುದಾಗಿ 2020ರ ನವೆಂಬರ್‌ನಲ್ಲಿ ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಜೇಕಬ್ ವರ್ಗೀಸ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಚಿತ್ರೀಕರಣದ ಖರ್ಚನ್ನು ಸಂಸ್ಥೆಯಿಂದಲೇ ಭರಿಸಲಾಗಿತ್ತು.
ಆದರೆ ಚಿತ್ರೀಕರಣದ ನಂತರ ಕಾಪಿರೈಟ್ಸ್ ವರ್ಗಾಯಿಸದೇ ತಾವೇ ಬೇರೆಡೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 2020/21ನೇ ಸಾಲಿನಲ್ಲಿ ತಾನೇ ಸಾಕ್ಷ್ಯಚಿತ್ರದ ಕಾಪಿರೈಟ್ಸ್ ಮಾಲೀಕ ಎಂದು ಆಸ್ಕರ್ ಅಕಾಡೆಮಿ ಅವಾರ್ಡ್ಸ್ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಿದ್ದಾರೆ. ನಂತರ ತಾವೇ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಹೇಳಿಕೊಂಡು 2022ರ ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಸಾರ ಮಾಡಿದ್ದಾರೆ. ಯಾವುದೇ ಅಧಿಕಾರವನ್ನು ನೀಡದಿದ್ದರೂ ಸಹ ಸಾಕ್ಷ್ಯಚಿತ್ರವನ್ನು ಬಳಸಿಕೊಂಡು ಪ್ರಶಸ್ತಿ ಹಾಗೂ ಮನ್ನಣೆ ಗಳಿಸಿದ್ದಾರೆ. ನ್ಯಾಯಾಲಯದ ಆದೇಶಾನುಸಾರ, ಕಾಪಿರೈಟ್ಸ್ ಉಲ್ಲಂಘನೆ ತೆಗೆದು ಹಾಕಲಾಗಿದೆ. ಆದರೆ ಸಾಕ್ಷ್ಯಚಿತ್ರದ ವಿಡಿಯೋ ಹಾಗೂ ಆಡಿಯೋ ಹಿಂದಿರುಗಿಸದೇ ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.