ಹಿಂದಿ ಚಿತ್ರರಂಗದ ಬಹುಬೇಡಿಕೆಯ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ 90 ರ ದಶಕದ ಅತ್ಯಂತ ಪಾಪುಲರ್ ಆನ್ಸ್ಕ್ರೀನ್ ಜೋಡಿ. ಅದ್ಭುತ ನಟನೆ ಮೂಲಕ ಮೋಡಿ ಮಾಡಿದ್ದರು. ಈ ಕಾಂಬಿನೇಶನ್ ಹೇಗಿತ್ತು ಅಂದ್ರೆ ಆಫ್ ಸ್ಕ್ರೀನ್ನಲ್ಲೂ ಜೋಡಿಯಾದ್ರೆ ಚೆನ್ನಾಗಿರುತ್ತಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಅಂತಿಮವಾಗಿ ಪರಸ್ಪರರು ತಮ್ಮ ಜೀವನದಲ್ಲಿ ವಿಭಿನ್ನ ಅಧ್ಯಾಯ ಪ್ರಾರಂಭಿಸಿದರು.
ವೆಲ್ಕಮ್ ಪಾರ್ಟ್ 3: ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡಬೇಕೆಂಬುದು ಅಭಿಮಾನಿಗಳ ಆಸೆ. ಅಂತಿಮವಾಗಿ ಕನಸು ನನಸಾಗುವ ಕ್ಷಣ ಹತ್ತಿರದಲ್ಲಿದೆ. ಹೌದು, 20 ವರ್ಷಗಳ ಬ್ರೇಕ್ ಬಳಿಕ ವೆಲ್ಕಮ್ ಪಾರ್ಟ್ 3 ರಲ್ಲಿ ಈ ಜೋಡಿ ಮತ್ತೆ ಒಂದಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಚಾರ ಬಹಿರಂಗವಾಗಿದೆ.
20 ವರ್ಷಗಳ ಬ್ರೇಕ್ ಬಳಿಕ ಮತ್ತೆ ಸಿನಿಮಾ:ನಟ ಅಕ್ಷಯ್ ಕುಮಾರ್ ಮತ್ತು ನಟಿ ರವೀನಾ ಟಂಡನ್ ಅವರು ಜೊತೆಯಾಗಿ ಮೊಹ್ರಾ, ಕಿಲಾಡಿಯೋನ್ ಕಾ ಕಿಲಾಡಿ, ಬರೂದ್, ಕೀಮತ್ ಸೇರಿದಂತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. 'ಪೊಲೀಸ್ ಫೋರ್ಸ್: ಆ್ಯನ್ ಇನ್ಸೈಡ್ ಸ್ಟೋರಿ' ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2004 ರಲ್ಲಿ ತೆರೆಕಂಡು ಯಶಸ್ವಿ ಆಗಿತ್ತು. 20 ವರ್ಷಗಳ ಬ್ರೇಕ್ ಬಳಿಕ ಈ ಜೋಡಿ ವೆಲ್ಕಮ್ 3 ನಲ್ಲಿ ಮತ್ತೆ ಕೆಲಸ ಮಾಡಲಿದೆ. ಸಿನಿಮಾ, ಪಾತ್ರಗಳ ಬಗ್ಗೆ ಮಾಹಿತಿಯನ್ನು ಗುಟ್ಟಾಗೇ ಇಡಲಾಗಿದ್ದು, ಹಿಂದೆಂದೂ ನೋಡಿರದಂತೆ ಭಿನ್ನವಾಗಿ ಮೂಡಿಬರಲಿದೆ ಎಂದು ಹೇಳಲಾಗಿದೆ.