ಪಠಾಣ್ ಮತ್ತು ಜವಾನ್ ಯಶಸ್ಸಿನ ನಂತರ ಬಂದ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಂಕಿ' ಉತ್ತಮ ಪ್ರದರ್ಶನ ಕಾಣುತ್ತಿದೆಯಾದರೂ, ಬಾಕ್ಸ್ ಆಫೀಸ್ ವಿಚಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಸ್ಟಾರ್ ಡೈರಕ್ಟರ್ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಗುರುವಾರ ತೆರೆಕಂಡು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು. ಕಿಂಗ್ ಖಾನ್ ಅವರ ಅಭಿಮಾನಿಗಳು ಬಹಳ ಅದ್ಧೂರಿಯಾಗೇ ಸಿನಿಮಾವನ್ನು ಸ್ವಾಗತಿಸಿದರು. ಮೊದಲ ದಿನ ಭರವಸೆಯ ಅಂಕಿ- ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಅದಾಗ್ಯೂ, ಸಿನಿಮಾದ ಗಳಿಕೆ ಎರಡನೇ ದಿನ ಕೊಂಚ ಇಳಿಕೆ ಕಂಡಿದೆ.
ತೆರೆಕಂಡ ಮೊದಲ ದಿನ - ಗುರುವಾರ ಉತ್ತಮ ಪ್ರದರ್ಶನ ಕಂಡ ಡಂಕಿ ಸಿನಿಮಾ ಎರಡನೇ ದಿನದ ಸಂಗ್ರಹದಲ್ಲಿ ಕೊಂಚ ಇಳಿಕೆ ಕಂಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಶಾರುಖ್ ಖಾನ್ ಮುಖ್ಯಭೂಮಿಕೆಯ ಡಂಕಿ ಶುಕ್ರವಾರದಂದು 20.50 ಕೋಟಿ ರೂ. ಗಳಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಎರಡು ದಿನಗಳ ಒಟ್ಟು ಕಲೆಕ್ಷನ್ 49.7 ಕೋಟಿ ರೂ. ಆಗಿದೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಕೊನೆಯ ಎರಡು ಬ್ಲಾಕ್ಬಸ್ಟರ್ ಸಿನಿಮಾಗಳಾದ ಪಠಾಣ್ ಮತ್ತು ಜವಾನ್ನ ಆರಂಭಿಕ ಅಂಕಿ-ಅಂಶಗಳಿಗೆ ಹೋಲಿಸಿದರೆ ಡಂಕಿ ಕೊಂಚ ಕಡಿಮೆ ಇದೆ. ಭಾರತದಲ್ಲಿ ಪಠಾಣ್ ಮೊದಲ ದಿನ 57 ಕೋಟಿ ರೂ. ಮತ್ತು ಜವಾನ್ 75 ಕೋಟಿ ರೂ. ಸಂಗ್ರಹಿಸಿತ್ತು. 'ಡಂಕಿ' ಇದೇ ಸಾಲಿನಲ್ಲಿ ತೆರೆಕಂಡ ಎಸ್ಆರ್ಕೆ ಅಭಿನಯದ ಮೂರನೇ ಸಿನಿಮಾ.
ಶುಕ್ರವಾರದಂದು ಡಂಕಿ ಚಿತ್ರದ ಸಹ-ನಿರ್ಮಾಪಕಿಯಾಗಿರುವ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರು ಚಿತ್ರದ ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ, "ಡಂಕಿ ವಿಶ್ವದಾದ್ಯಂತ ಪ್ರೀತಿಯನ್ನು ಗೆದ್ದಿದೆ. ಜಾಗತಿಕ ಕಲೆಕ್ಷನ್ 58 ಕೋಟಿ ರೂ.'' ಎಂದು ಬರೆದುಕೊಂಡಿದ್ದರು. 58 ಕೋಟಿ ರೂ. ಮೊದಲ ದಿನದ ಒಟ್ಟು (ಜಾಗತಿಕ) ಕಲೆಕ್ಷನ್.