ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾವೊಂದು ಬಾಲಿವುಡ್ಗಾಗಿ ತಯಾರಾಗಿದೆ. ಹಿಂದಿ ಚಿತ್ರರಂಗಕ್ಕೆ ಕಾಶ್ಮೀರದ ಮೊದಲ ಚಲನಚಿತ್ರ ಎಂದು ಹೇಳಲಾದ 'ವೆಲ್‌ಕಮ್ ಟು ಕಾಶ್ಮೀರ್' ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್ ಅನ್ನು ಪ್ರವಾಸೋದ್ಯಮ ಕಾರ್ಯದರ್ಶಿ ಸೈಯದ್ ಅಬಿದ್ ರಶೀದ್ ಶಾ ಅನಾವರಣಗೊಳಿಸಿದ್ದಾರೆ.
ಚಿತ್ರವನ್ನು ತಾರಿಕ್ ಭಟ್ ನಿರ್ದೇಶಿಸಿದ್ದು, ಮೇ 26 ರಂದು ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿದೆ. ಈ ಚಿತ್ರವು ಕಣಿವೆ ನಗರಿಯ ಜನರನ್ನು ಸಕಾರಾತ್ಮಕವಾಗಿ ಬಿಂಬಿಸುವ ಗುರಿಯನ್ನು ಹೊಂದಿದೆ. ಪ್ರಮುಖವಾಗಿ ಮಹಿಳಾ ಸಬಲೀಕರಣ ಮತ್ತು ಮಾದಕ ವ್ಯಸನದ ಬಳಕೆ ಮತ್ತು ಅವುಗಳ ದುಷ್ಪರಿಣಾಮಗಳ ಮೇಲೆ ಕೇಂದ್ರೀಕರಿಸಿದೆ.
ಶ್ರೀನಗರದಲ್ಲಿನ ಐನಾಕ್ಸ್ ಚಿತ್ರಮಂದಿರದಲ್ಲಿ ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ಸೈಯದ್, "ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಿನಿಮಾಗಳನ್ನು ಮಾಡಿರುವುದು ನಿಜಕ್ಕೂ ಸಂತಸದಾಯಕ. ಡ್ರಗ್ಸ್ ಹಾವಳಿ ಪ್ರಪಂಚದಾದ್ಯಂತ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮ ಸಮಾಜವು ಇಂತಹ ಮಾದಕ ವ್ಯಸನಗಳ ನಿರ್ಮೂಲನೆಗೆ ಶ್ರಮಿಸುತ್ತಿದೆ. ಆದರೆ ಈ ಕೆಲಸವನ್ನು ಮಾಡಬೇಕಾಗಿರುವುದು ಕೇವಲ ಒಂದು ಇಲಾಖೆ ಅಥವಾ ಸರ್ಕಾರ ಎನ್ನುವುದಕ್ಕಿಂತ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ." ಎಂದು ಹೇಳಿದರು.
ಮುಂದುವರೆದು, "ಕಾಶ್ಮೀರದವನಾದ ನನಗೆ ಇಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವುದು ತುಂಬಾ ಖುಷಿ ತಂದುಕೊಟ್ಟಿದೆ. ಇಲ್ಲಿನ ನಗರದ ಸೋನ್ವಾರ್ ಪ್ರದೇಶದಲ್ಲಿ ಐನಾಕ್ಸ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳನ್ನು ಪುನರಾರಂಭಿಸಿರುವುದು ಸ್ಥಳೀಯ ಕಲಾವಿದರಿಗೂ ಅನುಕೂಲ ಮಾಡಿದೆ. ಸಿನಿಮಾವು ಮಾದಕ ವ್ಯಸನದ ವಿರುದ್ಧ ಹೋರಾಡುವುದು ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಹೇಳಿದೆ. ಇದು ಕಾಶ್ಮೀರಿ ಸಂಸ್ಕೃತಿಯನ್ನು ಮುಟ್ಟಿದೆ. ಜನರಿಗೆ ಈ ಸಿನಿಮಾ ಇಷ್ಟವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ನುಡಿದರು.