ಬೆಂಗಳೂರು:ಡಾ.ರಾಜ್ ಕಪ್ ಕ್ರಿಕೆಟ್ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಂದನವನದ ತಾರೆಯರು ತಯಾರಿ ಆರಂಭಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಸ್ಮಾರಣಾರ್ಥವಾಗಿ ಟೂರ್ನಿ ಆಯೋಜಿಸಲಾಗಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಜರ್ಸಿ ಬಿಡುಗಡೆಗೊಳಿಸಿದರು.
ಆಯೋಜಕರಾದ ರಾಜೇಶ್ ಬ್ರಹ್ಮಾವರ ಮಾತನಾಡಿ, "ರಾಜ್ ಕಪ್ ಆರನೇ ಸೀಸನ್ ಅನ್ನು ವಿದೇಶದಲ್ಲಿ ಮಾಡುತ್ತಿರುವುದು ಕಷ್ಟವಾಗುತ್ತಿಲ್ಲ. ನನಗೆ ಚಿನ್ನದಂತಹ ನಾಯಕರು, ಮಾಲಕರು ಹಾಗೂ ಆಟಗಾರರು ಸಿಕ್ಕಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಮಾಲಕರೇ ತಂಡವನ್ನು ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಪಂದ್ಯಾವಳಿ ಮಾಡುತ್ತೇನೆ ಎಂಬುದು ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂದಿದ್ದರು. ಪ್ರಯತ್ನ ಮಾಡಿ ಮಾಡಿ ಅನುಮತಿ ತೆಗೆದುಕೊಂಡು ಬಂದಿದ್ದೇವೆ" ಎಂದರು.
ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿಸೆಂಬರ್ 3 ಮತ್ತು 4ಕ್ಕೆ ಸಿಂಗಾಪುರ್, ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ಕರ್ನಾಟಕದಲ್ಲಿ ಫೈನಲ್ ನಡೆಯಲಿದೆ.