ಕರ್ನಾಟಕ

karnataka

ಅನುವಂಶೀಯ ಕಾರಣದಿಂದ ಪುನೀತ್ ರಾಜ್​​ಕುಮಾರ್‌​ಗೆ ಹೃದಯಾಘಾತ: ಡಾ.ಸಿ.ಎನ್ ಮಂಜುನಾಥ್

By

Published : Sep 9, 2022, 1:57 PM IST

Updated : Sep 9, 2022, 3:41 PM IST

ಪುನೀತ್ ಅವರ ಸಹೋದರರಾದ ರಾಘವೇಂದ್ರ ರಾಜ್​​ಕುಮಾರ್, ಶಿವರಾಜ್​​​ಕುಮಾರ್ ಇಬ್ಬರಿಗೂ ಹೃದಯ ಸಂಬಂಧಿ ತೊಂದರೆಗಳಾಗಿದ್ದು, ಅದು ಅನುವಂಶೀಯವಾಗಿ ಬಂದಿರುವುದಾಗಿದೆ. ಈ ಅನುವಂಶೀಯ ಕಾರಣದಿಂದಲೇ ಪುನೀತ್ ಅವರಿ​ಗೂ ಹೃದಯಾಘಾತವಾಗಿದೆ ಎಂದು ಡಾ.ಸಿ.ಎನ್ ಮಂಜುನಾಥ್ ತಿಳಿಸಿದರು.

dr manjunath speaks on Puneeth death and heart disease
ಅನುವಂಶೀಯ ಕಾರಣದಿಂದ ಪುನೀತ್ ರಾಜ್​​ಕುಮಾರ್​​ಗೆ ಹೃದಯಾಘಾತ

ಮೈಸೂರು: ದಿ. ಪುನೀತ್ ರಾಜ್​​​ಕುಮಾರ್ ಕುಟುಂಬಸ್ಥರಿಗೆ ಹೃದಯ ಸಂಬಂಧಿ ತೊಂದರೆಗಳಿದ್ದು, ಅನುವಂಶೀಯ ಕಾರಣಗಳಿಂದ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ಡಾ.ಸಿ.ಎನ್ ಮಂಜುನಾಥ್ ಅವರು ಪುನೀತ್ ರಾಜ್​​​ಕುಮಾರ್ ಸಾವಿನ ಬಗ್ಗೆ ಸಂವಾದದಲ್ಲಿ ವಿವರಿಸಿದರು.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಹೃದ್ರೋಗ ಸಮಸ್ಯೆ ಸಂಬಂಧ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಮಾತನಾಡಿದರು. ಪುನೀತ್ ಅವರ ಸಹೋದರರಾದ ರಾಘವೇಂದ್ರ ರಾಜ್​​ಕುಮಾರ್, ಶಿವರಾಜ್​​​ಕುಮಾರ್ ಇಬ್ಬರಿಗೂ ಹೃದಯ ಸಂಬಂಧಿ ತೊಂದರೆಗಳಾಗಿದ್ದು, ಅದು ಅನುವಂಶೀಯವಾಗಿ ಬಂದಿರುವುದಾಗಿದೆ. ಈ ಅನುವಂಶೀಯ ಕಾರಣದಿಂದ ಪುನೀತ್​ಗೂ ಹೃದಯಾಘಾತವಾಗಿದೆ ಎಂದು ತಿಳಿಸಿದರು.

ಡಾ.ಸಿ.ಎನ್ ಮಂಜುನಾಥ್ ಪ್ರತಿಕ್ರಿಯೆ

ನಮ್ಮ ದೇಶದಲ್ಲಿ ಶೇ.50ರಷ್ಟು ಸಾವುಗಳು ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್​ನಂತಹ ರೋಗಗಳಿಂದ ಸಂಭವಿಸುತ್ತಿವೆ. ವಾಹನಗಳು, ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯವಾದ ಗಾಳಿಯಲ್ಲೇ ಉಸಿರಾಡುವುದು ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಒಂಟಿತನದಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮೊಬೈಲ್, ಟಿವಿ ಗೀಳಿಗೆ ಅಂಟಿಕೊಂಡು ಬಹುಬೇಗನೆ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ ಎಂದು ಹೇಳಿದರು.

ಮೊದಲೆಲ್ಲಾ ವಯಸ್ಸಾದ ತಂದೆ ತಾಯಿಯರನ್ನು ಮಕ್ಕಳು ಆಸ್ಪತ್ರೆಗೆ ಕರೆ ತರುತ್ತಿದ್ದರು. ಆದರೀಗ ತಂದೆ ತಾಯಂದಿರೇ ಅವರ ಮಕ್ಕಳನ್ನು ಚಿಕಿತ್ಸೆಗೆ ಕರೆ ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವ ಭಾರತೀಯರ, ಮಧ್ಯ ವಯಸ್ಕರ ಹೃದಯದ ಆರೋಗ್ಯ ಚೆನ್ನಾಗಿಲ್ಲ. ಹೃದ್ರೋಗಕ್ಕೆ ತುತ್ತಾಗುತ್ತಿರುವ ವಯಸ್ಕರಲ್ಲಿ ಶೇಕಡ 50ರಷ್ಟು ಧೂಮಪಾನಿಗಳಾಗಿದ್ದಾರೆ. ಇನ್ನೂ ಕೆಲವರಿಗೆ ಅನುವಂಶೀಯವಾಗಿಯೂ ಹೃದಯಾಘಾತ ಆಗುವ ಸಂಭವವಿದೆ ಎಂದರು.

ಜನರ ಜೀವನ ಶೈಲಿ ಬದಲಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಅತಿಯಾದ ಒತ್ತಡದಿಂದ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಹಾಗಾಗಿ ಹೃದಯಾಘಾತ ಸಂಭವಿಸಿದಾಗ ತಡ ಮಾಡದೇ ಚಿಕಿತ್ಸೆ ಪಡೆಯಬೇಕು. 30 ನಿಮಿಷ ತಡ ಮಾಡಿದರೆ ಸಾವಿನ‌ ಪ್ರಮಾಣ ಶೇ.7ರಷ್ಟು ಹೆಚ್ಚುತ್ತಾ ಹೋಗುತ್ತದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ಪಡೆಯುವುದರಿಂದ ಸಾವನ್ನು ತಡೆಯಬಹುದು. ಜೊತೆಗೆ 35 ವರ್ಷ ದಾಟಿದ ಪುರುಷರು, 45 ವರ್ಷ ದಾಟಿದ ಮಹಿಳೆಯರು ಸಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಇದನ್ನೂ ಓದಿ:'ಲಕ್ಕಿಮ್ಯಾನ್' ಬಿಡುಗಡೆ: ದೇವರ ರೂಪದಲ್ಲಿ ಅಭಿಮಾನಿಗಳಿಗೆ ದರ್ಶನ ಕೊಟ್ಟ ಅಪ್ಪು

ಈ ಮೊದಲು ಹೃದಯ ಸಂಬಂಧಿ ಕಾಯಿಲೆಗಳು ಪಟ್ಟಣಗಳಿಗೆ ಮಾತ್ರ ಸೀಮಿತ ಎಂದು ಹೇಳಲಾಗುತ್ತಿತ್ತು. ಇಂದು ಬದಲಾದ ಜೀವನ ಶೈಲಿಯಿಂದ ಹಳ್ಳಿಯಲ್ಲಿಯೂ ಹೃದಯಾಘಾತ ಸಂಖ್ಯೆ ಹೆಚ್ಚಾಗುತ್ತಿವೆ. ಕಾರಣ, ಜನರು ನಿರಾಯಾಸ ಜೀವನದತ್ತ ವಾಲುತ್ತಿರುವುದಾಗಿದೆ. ಭಾರತ ದೇಶದಲ್ಲೇ ಶೇ.50ರಷ್ಟು ಜನರು ಸೋಮಾರಿಗಳು ಕಂಡು ಬರುತ್ತಿರುವುದು ದುರ್ದೈವ ಸಂಗತಿ. ಹಳ್ಳಿ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಪೂರಕ ಚಿಕಿತ್ಸೆ ಕೊಡಲು, ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಬಹುತೇಕ ವೈದ್ಯರು ಸಿದ್ಧರಿದ್ದಾರೆ‌. ಆದರೆ ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣವಿಲ್ಲ. ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ದಬ್ಬಾಳಿಕೆ ನಡೆಸುತ್ತಾರೆ. ಹಳ್ಳಿಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲು ಸರ್ಕಾರ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Last Updated : Sep 9, 2022, 3:41 PM IST

ABOUT THE AUTHOR

...view details