ಕನ್ನಡ ಸಿನಿಮಾ ರಂಗದಲ್ಲಿ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾದ ಮೂಲಕ ಖ್ಯಾತಿ ಪಡೆದ ಪ್ರತಿಭಾವಂತ ನಿರ್ದೇಶಕ ಸತ್ಯ ಪ್ರಕಾಶ್. ಎರಡು ಅಪರೂಪದ ಸಿನಿಮಾಗಳ ಮೂಲಕ ಜನಮೆಚ್ಚುಗೆ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಸತ್ಯ ಪ್ರಕಾಶ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕ, ನಿರ್ಮಾಪಕನಾಗಿ ಯಶಸ್ವಿಯಾಗಿರುವ ಸತ್ಯ ಪ್ರಕಾಶ್ ಸದ್ಯ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಈ ನಡುವೆ ನಿರ್ದೇಶಕರು ನಟನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಜೊತೆಗೆ ತಾವೇ ಬರೆದ ಕಥೆಗೆ ನಿರ್ದೇಶನ ಮಾಡಿ ನಿರ್ಮಾಣ ಮಾಡಿ ನಟನಾಗುವುದು ಒಂದು ರೀತಿ ಟ್ರೆಂಡ್ ಆಗಿದೆ. ಅಂತಹದ್ದೇ ಒಂದು ಪ್ರಯತ್ನಕ್ಕೆ ಸತ್ಯ ಪ್ರಕಾಶ್ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತ್ಯ ಪ್ರಕಾಶ್ ಇದೊಂದು ಹೊಸ ರೀತಿಯ ಕಥೆ.
ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ಘಟನೆ ನಡೆದಿರುತ್ತದೆ. ನನ್ನ ಬದುಕಿನಲ್ಲೂ ಒಂದಷ್ಟು ಘಟನೆಗಳು ನಡೆದಿವೆ. ಅವೆಲ್ಲವನ್ನೂ ಆಧರಿಸಿ ಕಥೆ ಹೆಣೆದಿದ್ದೇನೆ. ಈ ಕಥೆಯಲ್ಲಿ ಒಬ್ಬ ಹೊಸ ನಾಯಕ ನನಗೆ ಕಾಣುತ್ತಿದ್ದಾನೆ ಆದರಿಂದ ನಾನೇ ನಟಿಸುತ್ತಿದ್ದೇನೆ. ನಾಯಕ ನಟ ಅನ್ನೋದಕ್ಕಿಂತ ಮುಖ್ಯ ಪಾತ್ರ ಎಂದಷ್ಟೇ ಹೇಳಬಹುದು ಎನ್ನುತ್ತಾರೆ ನಿರ್ದೇಶಕ ಸತ್ಯ ಪ್ರಕಾಶ್.