ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿರುವ ನಿರ್ದೇಶಕ ಎಂದರೆ ಅದು ಆರ್ ಚಂದ್ರು. ಕಳೆದ ಹದಿನೈದು ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಾ ಬಂದಿರುವ ಆರ್ ಚಂದ್ರು ಅವರ ಸಿನಿಮಾಗಳು ವಿಭಿನ್ನ. ತಾಜ್ ಮಹಲ್, ಚಾರ್ ಮಿನಾರ್, ಮೈಲಾರಿ, ಕಬ್ಜ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕ್ಲಾಸ್ ಅಂಡ್ ಮಾಸ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸಣ್ಣ ಹಳ್ಳಿಯಿಂದ ಬಂದು, "ಕಬ್ಜ" ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ನಿರ್ದೇಶಕ ಆರ್ ಚಂದ್ರು ಅವರ ಸಿನಿಪಯಣಕ್ಕೆ ಇಂದು ಹದಿನೈದರ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಆರ್ ಚಂದ್ರು ಅವರ ಆರಂಭದ ದಿನಗಳು ಬಹಳ ಕಷ್ಟದಿಂದ ಕೂಡಿದ್ದವು. ಬಾಲ್ಯದಿಂದಲೂ ಸಿನಿಮಾ ಗೀಳು ಅಂಟಿಸಿಕೊಂಡಿದ್ದ ಆರ್ ಚಂದ್ರು ತಾವು ಅಂದುಕೊಂಡಂತೆ ಸಾಧನೆ ಮಾಡಿದ ಹಳ್ಳಿ ಪ್ರತಿಭೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೇಶವಾರದಲ್ಲಿ ರಾಮಯ್ಯ ಹಾಗೂ ಲಕ್ಷ್ಮಿ ದೇವಮ್ಮ ದಂಪತಿಗೆ ಜನಿಸಿದ ಆರ್ ಚಂದ್ರು ಅವರ ಬಾಲ್ಯ ಬಹುತೇಕ ಬಡತನದಲ್ಲಿಯೇ ಕಳೆಯಿತು. ಶಾಲಾ ದಿನಗಳಿಂದಲೂ ಚಂದ್ರು ಅವರಿಗೆ ವಿದ್ಯಾಭ್ಯಾಸಕ್ಕಿಂತ ಸಿನಿಮಾ ಹುಚ್ಚು ಹೆಚ್ಚಿತ್ತು. ಸಿನಿಮಾ ನೋಡುವುದೆಂದರೆ ಬಹಳ ಪ್ರೀತಿ. ಸಿನಿಮಾ ಮಾಡಬೇಕು ಎಂಬ ಕನಸನ್ನೂ ಹೊತ್ತಿದ್ದರು. ಒಮ್ಮೆಯಂತೂ ಕೆಮಿಸ್ಟ್ರಿ ಪರೀಕ್ಷೆ ತಪ್ಪಿಸಿ, ನಂದಿ ಬೆಟ್ಟದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನೋಡಲು ಹೊರಟು ಹೋಗಿದ್ದರಂತೆ. ಆ ಮಟ್ಟಿಗೆ ಆರ್ ಚಂದ್ರು ಸಿನಿಮಾ ಹುಚ್ಚು ಹಿಡಿಸಿಕೊಂಡಿದ್ದರು.
ಇದೀಗ ಆರ್ ಚಂದ್ರು ಅವರ ನಿರ್ದೇಶನದ ಮೊದಲ ಚಿತ್ರ "ತಾಜ್ ಮಹಲ್" ತೆರೆಕಂಡು ಇಂದಿಗೆ ಹದಿನೈದು ವರ್ಷಗಳಾಗಿದೆ. 2008ರ ಜುಲೈ 25 ಈ ಚಿತ್ರ ತೆರೆ ಕಂಡಿತ್ತು. ಶಿವಶಂಕರ್ ರೆಡ್ಡಿ ಅವರು ನಿರ್ಮಿಸಿದ್ದ, ಅಜಯ್ ರಾವ್ ಹಾಗೂ ಪೂಜಾ ಗಾಂಧಿ ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಅನೇಕ ಚಿತ್ರಮಂದಿರಗಳಲ್ಲಿ 200ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್ ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು. ನಂತರದ ದಿನಗಳಲ್ಲಿ ಆರ್ ಚಂದ್ರು, "ತಾಜ್ ಮಹಲ್" ಚಂದ್ರು ಅಂತಲೇ ಪ್ರಸಿದ್ಧರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010ರಲ್ಲಿ "ತಾಜ್ ಮಹಲ್" ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆ ಆಗಿತ್ತು.