ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ತುಣುಕುಗಳು ಸೋರಿಕೆಯಾದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಸಾಮಾಜಿಕ ಮಾಧ್ಯಮಗಳು, ಕೆಲ ವೆಬ್‌ಸೈಟ್‌ಗಳು ಮತ್ತು ಕೇಬಲ್ ಟಿವಿ ಔಟ್‌ಲೆಟ್‌ಗಳಿಗೆ ವೈರಲ್ ಆದ ವಿಡಿಯೋ ಕ್ಲಿಪ್‌ಗಳನ್ನು ಕೂಡಲೇ ತೆಗೆದುಹಾಕುವಂತೆ ಮತ್ತು ಅವುಗಳ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ.
ನಿರ್ಮಾಣ ಹಂತದಲ್ಲಿರುವ ಜವಾನ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತವನ್ನು ತಲುಪಿದೆ. ಈ 'ಜವಾನ್' ಚಿತ್ರದ ಹೊಡೆದಾಟದ ದೃಶ್ಯ ಮತ್ತು ನೃತ್ಯವೊಂದರ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿತ್ತು. ಈ ಕುರಿತು ಶಾರುಖ್ ಖಾನ್ ಮತ್ತು ಅವರ ಪತ್ನಿ ಗೌರಿ ಖಾನ್ ಒಡೆತನದ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಹರಿಶಂಕರ್ ನೇತೃತ್ವದ ದೆಹಲಿ ಹೈಕೋರ್ಟ್ ಪೀಠವು ಮಂಗಳವಾರ ಯೂಟ್ಯೂಬ್, ಗೂಗಲ್, ಟ್ವಿಟರ್ ಮತ್ತು ಕೆಲ ವೆಬ್ಸೈಟ್ಗಳಿಗೆ ಕೂಡಲೇ ಪ್ರಸಾರವನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ. ಜೊತೆಗೆ, ಸೋರಿಕೆಯಾದ ವಿಡಿಯೋ ಕ್ಲಿಪ್‌ಗಳ ಪ್ರಕಟಣೆ ಮತ್ತು ಅನಧಿಕೃತ ಪ್ರಸರಣವು ಪ್ರಚಾರ ಮತ್ತು ಶೋಷಣೆಯ ಹಕ್ಕುಗಳಿಗೆ ಧಕ್ಕೆ ತರುತ್ತದೆ. ಇದು ಹಕ್ಕುಸ್ವಾಮ್ಯ / ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯಾಗಿದೆ. ಪರಿಣಾಮ ಅರ್ಜಿದಾರರಿಗೆ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಇದನ್ನೂ ಓದಿ :'ಜವಾನ್' ಸೆಟ್ನಿಂದ ಶಾರುಖ್, ದೀಪಿಕಾ ಫೋಟೋ ಸೋರಿಕೆ