ಬೆಂಗಳೂರು: ಒಂದು ಸಮಯದಲ್ಲಿ ಕನ್ನಡ ಮಾತ್ರವಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು, ಸದ್ಯ ಸಂಸದೆಯಾಗಿ ಸೇವೆ ಸಲ್ಲಿಸುತ್ತಿರುವ ಸುಮಲತಾ ಅಂಬರೀಶ್ ಅವರು ಇಂದು 60ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಸುಮಲತಾ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್ - ಸುದೀಪ್:ಮಂಡ್ಯದ ಗಂಡು ದಿ. ಅಂಬರೀಶ್ ಪತ್ನಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಿನ್ನೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬರ್ತ್ ಡೇ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಸೆಲೆಬ್ರೇಶನ್ಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಸಾಕ್ಷಿಯಾಗಿದ್ದರು. ಇವರಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ಸ್ಟಾರ್ಗಳಾಗಿ ಗುರುತಿಸಿಕೊಂಡಿರುವ ನಟರಾದ ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗುತ್ತಾರಾ? ಎಂಬ ಪ್ರಶ್ನೆ ಸೆಲೆಬ್ರಿಟಿಗಳೂ ಸೇರಿದಂತೆ ಅಭಿಮಾನಿಗಳಲ್ಲಿ ಮೂಡಿದೆ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸುದೀಪ್ ಹಾಗೂ ದರ್ಶನ್ ಜೋಡಿ ಹೆಚ್ಚಿನ ಸಭೆ-ಸಮಾರಂಭ, ಕ್ರಿಕೆಟ್ ಹೀಗೆ ಜುಗಲ್ ಬಂಧಿಯಾಗಿ ಗುರುತಿಸಿಕೊಂಡಿದ್ದರು. ಆದ್ರೀಗ ಇಬ್ಬರೂ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ವೈಯಕ್ತಿಕ ಮನಸ್ತಾಪ ಎಂಬುದು ಅಭಿಮಾನಿಗಳ ಊಹೆ. ಇದೀಗ ಈ ಕುಚಿಕುಗಳು ಮತ್ತೆ ಒಂದಾಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವಾಗಿದ್ದು ಆ ಒಂದು ಬರ್ತ್ ಡೇ ಪಾರ್ಟಿ.