ಕಳೆದ ಹಲವು ದಿನಗಳಿಂದ ಸಾವು-ಬದುಕಿನ ಮಧ್ಯೆ ನಿರಂತರ ಹೋರಾಟ ನಡೆಸುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕರತ್ನ ನಿನ್ನೆ ಸಂಜೆ ನಿಧನ ಹೊಂದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಿನಿಮಾರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೋದಿ ಟ್ವೀಟ್:"ತಾರಕರತ್ನ ಅವರು ಚಲನಚಿತ್ರಗಳು ಮತ್ತು ಮನೋರಂಜನಾ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ತಾರಕರತ್ನ ಅವರ ಕುಟುಂಬಸ್ಥರಿಗೆ ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ವೆಂಕಯ್ಯ ನಾಯ್ಡು ಸಂತಾಪ: "ಖ್ಯಾತ ನಟ ನಂದಮೂರಿ ತಾರಕರತ್ನ ಅವರು ನಿಧನರಾಗಿದ್ದಾರೆಂಬ ವಿಷಯ ತಿಳಿದು ನನಗೆ ಬಹಳ ದುಃಖವಾಗಿದೆ. ಅವರಿಗೆ ಹೃದಯಾಘಾತ ಆದಾಗಿನಿಂದ ನಾನು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಅವರು ಚೇತರಿಸಿಕೊಂಡು ನಮ್ಮೆಲ್ಲರ ಬಳಿಗೆ ಮರಳುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ಸುದ್ದಿ ಕೇಳಿ ಬೇಸರವಾಯಿತು. ತಾರಕರತ್ನ ಅವರು ಚಿಕ್ಕ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ನಂದಮೂರಿ ರಾಮಕೃಷ್ಣ ಸಂತಾಪ:ನಂದಮೂರಿ ತಾರಕರತ್ನ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಅವರ ಪ್ರೀತಿ, ವಾತ್ಸಲ್ಯ ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಿತ್ರ ನಿರ್ಮಾಪಕ ನಂದಮೂರಿ ರಾಮಕೃಷ್ಣ ತಿಳಿಸಿದ್ದಾರೆ.
'ನಿಜಕ್ಕೂ ಬೇಸರದ ಸಂಗತಿ': ನಂದಮೂರಿ ತಾರಕರತ್ನ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಚಿಕ್ಕ ವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ನಿಜಕ್ಕೂ ಬೇಸರದ ಸಂಗತಿ. ತಾರಕರತ್ನ ಕುಟುಂಬಕ್ಕೆ ದೇವರು ಧೈರ್ಯ ನೀಡಲಿ ಎಂದು ಹಾರೈಸುತ್ತೇನೆ ಎಂದು ನಟ ಮಹೇಶ್ ಬಾಬು ಹೇಳಿದ್ದಾರೆ.
ನಟ ರವಿತೇಜ ಟ್ವೀಟ್:ಸಾವಿನಲ್ಲೂ ಹೋರಾಡಿ ಬಳಿಕ ನಿಧನದ ದುಃಖದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಕರುಣಾಮಯಿ ಸ್ವಭಾವದವರು. ಕುಟುಂಬ ಸದಸ್ಯರಿಗೆ ನನ್ನ ಸಂತಾಪ ಎಂದು ನಟ ರವಿತೇಜ ಟ್ವೀಟ್ ಮಾಡಿದ್ದಾರೆ.