ಪ್ರತಿಭೆಯ ಜೊತೆಗೆ ಅದೃಷ್ಟ, ಯೋಗವೂ ಮುಖ್ಯ. ಹಾಕಿದ ಪರಿಶ್ರಮಕ್ಕೆ ತಕ್ಕ ಹಾಗೆ ಅದೃಷ್ಟ ಲಕ್ಷ್ಮೀ ಒಲಿಯಿತೆಂದರೆ ಮುಟ್ಟಿದ್ದೆಲ್ಲವೂ ಚಿನ್ನ. ಈ ಮಾತಿಗೆ ಪೂರಕವೆಂಬಂತೆ, ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ತನ್ನದೇ ಕಾಮಿಡಿ ಮ್ಯಾನರಿಸಂನಿಂದ ಕನ್ನಡಿಗರ ಮನ ಗೆದ್ದಿರುವ ಹಾಸ್ಯ ನಟ ಧರ್ಮಣ್ಣ ಬಿಗ್ ಸ್ಕ್ರೀನ್ನಲ್ಲಿ ನಾಯಕ ನಟನಾಗಿ ಮಿಂಚಲು ರೆಡಿಯಾಗಿದ್ದಾರೆ. ರಾಜಯೋಗ ಈ ಚಿತ್ರದ ಟೈಟಲ್.
ರಾಜಯೋಗ ಫಸ್ಟ್ ಲುಕ್ ಬಿಡುಗಡೆ: ಈಗಾಗಲೇ ಒಂದು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರದ ಫಸ್ಟ್ ಲುಕ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಲಿಂಗರಾಜ ಉಚ್ಚಂಗಿದುರ್ಗ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಕನ್ನಡ ಗೊತ್ತಿಲ್ಲ ಸಿನಿಮಾ ನಿರ್ಮಿಸಿದ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆ ಎನ್, ಅರ್ಜುನ್ ಅಣತಿ ಅಲ್ಲದೇ ಧರ್ಮಣ್ಣ ಅವರ ಸಹೋದರ ಹೊನ್ನಪ್ಪ ಕಡೂರು ಸೇರಿದಂತೆ ಆರು ನಿರ್ಮಾಪಕರು ಸೇರಿ ಈ ರಾಜಯೋಗ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
'ಎಲ್ಲರಿಗೂ ರಾಜಯೋಗ ಬಂದೇ ಬರುತ್ತದೆ': ನಿರ್ದೇಶಕ ಲಿಂಗರಾಜು ಮಾತನಾಡಿ, ಹಿಂದೆ ವಿಜಯಪ್ರಸಾದ್ ಜೊತೆ ಸಿಲ್ಲಿ ಲಲ್ಲಿ ಸೀರಿಯಲ್ಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಇಂಡಸ್ಟ್ರಿಗೆ ಬಂದೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾ ಪ್ರಾರಂಭವಾಗಲು ಕಾರಣ ದೀಕ್ಷಿತ್ ಕೃಷ್ಣ, ಧರ್ಮಣ್ಣ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ ಇದು ಎಂದು ತಿಳಿಸಿದರು.
ಧರ್ಮಣ್ಣ ಅವರನ್ನು ರಾಮ ರಾಮ ರೇ ಚಿತ್ರದಲ್ಲಿ ನೋಡಿದ್ದೆ. ಅವರ ಅಭಿನಯ ಇಷ್ಟವಾಗಿತ್ತು. ಹಾಗಾಗಿ ಈ ಚಿತ್ರದ ಮೂಲಕ ಅವರನ್ನು ಹೀರೋ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಅವರ ಸುತ್ತ ಬರುತ್ತವೆ. ತಂದೆ ಮಗನ ಸುತ್ತ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅಂಥದೇ ಕಥೆಯನ್ನು ನಮ್ಮ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರದ ಕೊನೆಯಲ್ಲಿ ಮಗ ತಂದೆಗೆ ಬುದ್ಧಿ ಕಲಿಸುವ ಕಥೆಯಿದೆ. ಚಿತ್ರದಲ್ಲಿ ಒಂದು ಸೀರಿಯಸ್ ವಿಷಯವನ್ನು ಹಾಸ್ಯದ ಮೂಲಕ ಹೇಳಲು ಪ್ರಯತ್ನಿಸಲಾಗಿದೆ ಎಂದರು.