ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶನ ಮಾಡಿ, ಮದಿಪು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಚೇತನ್ ಮುಂಡಾಡಿ ಈಗ ಕಮರ್ಷಿಯಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರಕ್ಮೆ ಭಾವಪೂರ್ಣ ಅಂತಾ ಟೈಟಲ್ ಕೂಡ ಇಡಲಾಗಿದೆ.
ನಿರ್ದೇಶಕ ಚೇತನ್ ಮುಂಡಾಡಿ ಮಾತನಾಡಿ, ಈವರೆಗೂ ಕಲಾತ್ಮಕ ಚಿತ್ರಗಳನ್ನೇ ನಿರ್ದೇಶಿಸಿರುವ ನನಗೆ ಇದು ಮೊದಲ ಕಮರ್ಷಿಯಲ್ ಚಿತ್ರ. ಇದು ತೊಂಭತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಭಾವನೆಗಳೇ ಇಲ್ಲಿನ ಪಾತ್ರಗಳು. ಪುಟ್ಟ ಗ್ರಾಮವೊಂದರಲ್ಲಿ 50ರ ವಯಸ್ಸಿನ ವ್ಯಕ್ತಿಯಲ್ಲಿ ಚಿಗುರುವ ಅನಿವಾರ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ಆತ ಪಡುವ ಪರಿಪಾಟಗಳೇ ಚಿತ್ರದ ಮುಖ್ಯ ಕಥಾಹಂದರ ಎಂದು ತಿಳಿಸಿದರು.
ಧರ್ಮಣ್ಣ ಎಂಬ ಮುಖ್ಯ ಪಾತ್ರದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಅಭಿನಯಿಸುತ್ತಿದ್ದಾರೆ. ಮಂಜುನಾಥ್ ಹೆಗಡೆ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಶೈಲಶ್ರೀ, ಮಂಗಳಾ, ನಾಗೇಂದ್ರ ಶಾ, ಅಥರ್ವ ಪ್ರಕಾಶ್, ವಿ.ಮನೋಹರ್, ಸುಜಯ್ ಶಾಸ್ತ್ರಿ, ಎಂ.ಕೆ.ಮಠ, ವಿನ್ಯಾ, ಉಗ್ರಂ ಮಂಜು, ಜೆಜಿ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.